Advertisement

ರೈತರ ಆದಾಯ ದುಪ್ಪಟ್ಟಿಗೆ ಬದ್ಧ: ಪ್ರಧಾನಿ ಮೋದಿ ಭರವಸೆ

10:26 AM Feb 21, 2018 | |

ಹೊಸದಿಲ್ಲಿ: “ನಾವು 2022ರೊಳಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಗುರಿ ಹಾಕಿಕೊಂಡಿದ್ದೇವೆ. ಹೆಚ್ಚು ಹೆಚ್ಚು ಕೃಷಿ ಸಾಲ ವಿತರಣೆ, ಉತ್ಪಾದನಾ ವೆಚ್ಚ ಕಡಿತ, ಉತ್ಪಾದಕತೆ ಸುಧಾರಣೆ ಮತ್ತು ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಇವುಗಳಿಂದಾಗಿ ಖಂಡಿತಾ ರೈತರ ಆದಾಯ ವೃದ್ಧಿಯಾಗಲಿದೆ.’

Advertisement

ಹೀಗೆಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ. ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿರುವ “2022ರೊಳಗೆ ರೈತರ ಆದಾಯ ದುಪ್ಪಟ್ಟುಗೊಳಿಸುವಿಕೆ’ ಎಂಬ ಸಮಾವೇಶದಲ್ಲಿ ಮಂಗಳವಾರ ಮಾತನಾಡಿದ ಅವರು, ರೈತರ ಆದಾಯ ವೃದ್ಧಿಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಕೇವಲ ಒಂದೇ ವರ್ಷದಲ್ಲಿ ದೇಶದ ದ್ವಿದಳ ಧಾನ್ಯ ಉತ್ಪಾದನೆ ಪ್ರಮಾಣ 1.70 ಕೋಟಿ ಟನ್‌ನಿಂದ 2.3 ಕೋಟಿ ಟನ್‌ಗೆ ಏರಿಕೆಯಾಗಿದೆ. ನಾವು ವಿತರಿಸಿರುವ ಸಾಯಿಲ್‌ ಹೆಲ್ತ್‌ ಕಾರ್ಡ್‌ನಿಂದಾಗಿ ಉತ್ಪಾದಕತೆ ಹೆಚ್ಚಿದೆ. ಜತೆಗೆ, ರಾಸಾಯನಿಕ ಗೊಬ್ಬರಗಳ ಬಳಕೆ ಶೇ.8ರಿಂದ 10ರಷ್ಟು ಇಳಿಕೆಯಾಗಿದ್ದು, ಉತ್ಪಾದಕತೆ ಶೇ.5ರಿಂದ 6ರಷ್ಟು ಹೆಚ್ಚಳವಾಗಿದೆ ಎಂದೂ ಮೋದಿ ತಿಳಿಸಿದರು.

2-3 ದಶಕಗಳಿಂದ ನನೆಗುದಿಗೆ ಬಿದ್ದಿದ್ದ 99ರಷ್ಟು ನೀರಾವರಿ ಯೋಜನೆಗಳನ್ನು ನಾವು ನಿರ್ದಿಷ್ಟ ಕಾಲಮಿತಿ ಹಾಕಿಕೊಂಡು ಪೂರ್ಣಗೊಳಿಸಿದ್ದೇವೆ. ಇದಕ್ಕಾಗಿ 80 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ. ಈ ಯೋಜನೆಗಳ ಪೈಕಿ ಅರ್ಧದಷ್ಟು ಈ ವರ್ಷದಲ್ಲೇ ಪೂರ್ಣಗೊಂಡರೆ, ಉಳಿದವು ಮುಂದಿನ ವರ್ಷ ಮುಗಿಯಲಿದೆ ಎಂದೂ ಮೋದಿ ಹೇಳಿದರು. ಉತ್ಪಾದನಾ ಸ್ಥಳದಿಂದ 5-15 ಕಿ.ಮೀ. ದೂರದೊಳಗೆ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಿದ್ದೇವೆ. ಇದಕ್ಕಾಗಿ 22 ಸಾವಿರ ಗ್ರಾಮೀಣ ಮಾರುಕಟ್ಟೆಗಳನ್ನು ಮೇಲ್ದರ್ಜೆಗೇರಿಸಲಿದ್ದೇವೆ ಎಂದೂ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next