ವಡ್ನಾಗರ್: ಪ್ರಧಾನಿ ಹುದ್ದೆಗೇ ರಿದ ಬಳಿಕ ಇದೇ ಮೊದಲ ಬಾರಿಗೆ ಪಿಎಂ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿರುವ ತಮ್ಮ ಹುಟ್ಟೂರು ವಡ್ನಾಗರ್‌ಗೆ ರವಿವಾರ ಭೇಟಿ ನೀಡಿದರು.
ಗುಜರಾತ್ ಪ್ರವಾಸದ 2ನೇ ದಿನವನ್ನು ತಮ್ಮ ಹುಟ್ಟೂರಲ್ಲಿ ಕಳೆದ ಮೋದಿ, ಇಲ್ಲಿ ರ್ಯಾಲಿ ನಡೆಸಿ ತಾವು ಹುಟ್ಟಿ ಬೆಳೆದ ಊರನ್ನು ನೆನಪಿಸಿಕೊಂಡು ಭಾವಪರ ವಶರಾಗಿ ಮಾತನಾಡಿದರು.
ಮಣ್ಣಿನ ಮಗನನ್ನು ಸ್ವಾಗತಿಸಲೆಂದು ಇಡೀ ಊರಿಗೆ ಊರೇ ಶೃಂಗಾರ ಗೊಂಡಿತ್ತಲ್ಲದೆ, ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಜನರು “ಮೋದಿ ಮೋದಿ’ ಎಂದು ಘೋಷಣೆ ಕೂಗುತ್ತಾ ಪ್ರಧಾನಿಯನ್ನು ಬರಮಾಡಿಕೊಂಡರು. ಹೀಗಾಗಿ, ಕಾರಿನಿಂದ ಇಳಿದ ಮೋದಿ ಅವರು, ಸಾರ್ವಜನಿಕರೊಂದಿಗೆ ಸ್ವಲ್ಪ ಹೊತ್ತು ಬೆರೆತರು. ನಾನೀಗ ಈ ಮಟ್ಟ ಕ್ಕೇರಲು ಈ ಊರು ಮತ್ತು ಇಲ್ಲಿನ ಜನರೇ ಕಾರಣ. ಹುಟ್ಟೂರಿಗೆ ಆಗಮಿ ಸುವು ದರಲ್ಲಿನ ಖುಷಿ ಬೇರೊಂದಿರಲಿಕ್ಕಿಲ್ಲ ಎಂದರು.
ಬಳಿಕ, ನಗರದ ಹೊರವಲಯದಲ್ಲಿ ನಿರ್ಮಿಸಲಾದ ವೈದ್ಯಕೀಯ ಕಾಲೇಜಿನ ಉದ್ಘಾಟನೆಗೆಂದು ತೆರಳುವಾಗ, ದಾರಿ ಮಧ್ಯೆ ಕಾರು ನಿಲ್ಲಿಸಿ, ತಾವು ಕಲಿತ ಶಾಲೆಗೆ ಭೇಟಿ ನೀಡಿದರು. ಬಿ.ಎನ್. ಹೈಸ್ಕೂಲ್‌ನ ಮೈದಾನ ಪ್ರವೇಶಿಸಿದ ಪ್ರಧಾನಿ, ಅಲ್ಲಿನ ಮಣ್ಣನ್ನು ಹಣೆಗೊತ್ತಿಕೊಂಡಿದ್ದೂ ಕಂಡುಬಂತು. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಾನು ಶಿವನ ಕೃಪೆಯಿಂದ ದೇಶದ ಸೇವೆ ಮಾಡುತ್ತಿದ್ದೇನೆ. 2001ರಿಂದಲೂ ವಿಷವನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಿದ್ದೂ ಶಿವನೇ’ ಎನ್ನುವ ಮೂಲಕ ಗುಜರಾತ್ ಗಲಭೆ ನಂತರ ಅವರ ವಿರುದ್ಧ ಬಂದ ಆರೋಪಗಳನ್ನು ಪರೋಕ್ಷವಾಗಿ ಸ್ಮರಿಸಿದರು.
ಆರೋಗ್ಯ ನೀತಿಗೆ ಟೀಕೆ: ಅಟಲ್ ಅವರ ಆಡಳಿತಾವಧಿಯಲ್ಲಿ ಅಂದರೆ 15 ವರ್ಷಗಳ ಹಿಂದೆ ದೇಶದಲ್ಲಿ ಆರೋಗ್ಯ ನೀತಿಯಿತ್ತು. ನಂತರ ಬಂದ ಸರಕಾರವು ಅಭಿವೃದ್ಧಿಯನ್ನು ದ್ವೇಷಿಸುವಂಥದ್ದು. ಹಾಗಾಗಿ, 15 ವರ್ಷಗಳ ನಂತರ ನಮ್ಮ ಸರಕಾರವು ಆರೋಗ್ಯ ನೀತಿಯನ್ನು ಜಾರಿ ಮಾಡಬೇಕಾಯಿತು ಎನ್ನುತ್ತಾ ಯುಪಿಎ ಸರಕಾರವನ್ನು ಟೀಕಿಸಿದರು.
ಕಹಿಬೇವು ಲೇಪಿತ ಯೂರಿಯಾದಿಂದ ರೈತರಿಗೆ ಅನುಕೂಲವಾಗಿದೆ: ಪ್ರಧಾನಿ
ರೈತರ ಕಷ್ಟಗಳು ನನ್ನನ್ನು ಬಿಟ್ಟು ಬೇರ್ಯಾರಿಗೂ ಅರ್ಥವಾಗುವುದಿಲ್ಲ. ಹಿಂದೆಲ್ಲ ರೈತರಿಗೆ ಯೂರಿಯಾವೇ ಸಿಗುತ್ತಿರಲಿಲ್ಲ. ಆದರೆ, ಈಗ ನನ್ನ ನೇತೃತ್ವದ ಸರಕಾರದಲ್ಲಿ ಯೂರಿಯಾ ಸುಲಭವಾಗಿ ಸಿಗುತ್ತಿದೆ ಎಂದು ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಯೂರಿಯಾಗೆ ಶೇ.100ರಷ್ಟು ಕಹಿಬೇವನ್ನು ಲೇಪಿಸಲು ನಿರ್ಧರಿಸಿದೆವು. ಆಗ ಅದನ್ನು ಕೃಷಿಗಷ್ಟೇ ಬಳಸುತ್ತಾರೆ, ರಾಸಾಯನಿಕ ಫ್ಯಾಕ್ಟರಿಗಳಲ್ಲಿ ಬಳಸಲು ಆಗುವುದಿಲ್ಲ. ಈಗ ಕಹಿಬೇವು ಮಿಶ್ರಿತ ಯೂರಿಯಾವು ರೈತರಿಗೆ ಬಹಳಷ್ಟು ಅನುಕೂಲ ಕಲ್ಪಿಸಿದೆ. ಇದರಿಂದ ಭ್ರಷ್ಟಾಚಾರ ಹಾಗೂ ಸಬ್ಸಿಡಿ ಸೋರಿಕೆ ನಿಂತಿದೆ ಎಂದಿದ್ದಾರೆ ಮೋದಿ.