ಲಾಹೋರ್: “ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಿದರೆ, ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ಸೇರುವಂತೆ ಮಾಡುತ್ತೇವೆ.’ ಇಂಥದ್ದೊಂದು ಉದ್ಧಟತನದ ಆಶ್ವಾಸನೆ ನೀಡಿದ್ದು ಪಾಕಿಸ್ಥಾನದ ಆಡಳಿತಾರೂಢ ಪಿಎಂಎಲ್-ಎನ್ ಪಕ್ಷದ ಮುಖ್ಯಸ್ಥ ಶಹಬಾಜ್ ಷರೀಫ್. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದ ಮಾದರಿಯಲ್ಲೇ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರ್ಪಡೆ ಗೊಳಿಸುತ್ತೇವೆ. ಅಷ್ಟೇ ಅಲ್ಲ, ಅಧಿಕಾರಕ್ಕೆ ಬಂದ ಬಳಿಕ ನಾವು ಪಾಕಿಸ್ಥಾನವನ್ನು ಭಾರತಕ್ಕಿಂತ ಮುಂದುವರಿದ ರಾಷ್ಟ್ರವನ್ನಾಗಿ ಬದಲಾಯಿಸದೇ ಇದ್ದರೆ ನನ್ನ ಹೆಸರನ್ನೇ ಬದಲಿಸಿಕೊಳ್ಳುತ್ತೇನೆ ಎಂದೂ ಪಂಜಾಬ್ ಪ್ರಾಂತ್ಯದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಷರೀಫ್ ಹೇಳಿದ್ದಾರೆ. ಇದೇ ವೇಳೆ, ಪಂಜಾಬ್ ಪ್ರಾಂತ್ಯದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದ ಪಕ್ಷವೇ ಕೇಂದ್ರದಲ್ಲಿ ಅಧಿಕಾರಕ್ಕೇರುತ್ತದೆ ಎಂದು ಹೇಳಲಾಗಿದ್ದು, ಪಿಎಂಎಲ್‌ಎನ್ ಹಾಗೂ ಇಮ್ರಾನ್ ಖಾನ್‌ರ ಪಿಟಿಐ ಮಧ್ಯೆ ಈ ಭಾಗದಲ್ಲಿ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಬುಧವಾರ ಮತದಾನ ನಡೆಯಲಿದೆ.
ಉಗ್ರ ಅಭ್ಯರ್ಥಿಗಳಿಂದ ಭೀತಿ: ಪಾಕಿಸ್ಥಾನದ ಲ್ಲೀಗ ತೀವ್ರವಾದಿ ಹಾಗೂ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಸಾಂಪ್ರದಾಯಿಕ ಪಕ್ಷಗಳಿಗೆ ನಡುಕ ಹುಟ್ಟಿಸಿದೆ.
ಕಿಡ್ನಿ ವೈಫಲ್ಯ?
ಭ್ರಷ್ಟಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಪಾಲಾಗಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಸದ್ಯದಲ್ಲೇ ಕಿಡ್ನಿ ವೈಫಲ್ಯಕ್ಕೆ ತುತ್ತಾಗುವ ಲಕ್ಷಣಗಳು ಕಾಣಿಸಿ ಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕೆಂದು ವೈದ್ಯರು ಪಾಕಿಸ್ಥಾನ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ.