Advertisement

PM Vishwakarma Yojana ಅರ್ಜಿ ಪ್ರಕ್ರಿಯೆಗಾಗಿ ಗ್ರಾ.ಪಂ. ಅಧ್ಯಕ್ಷರಿಗೆ ಲಾಗಿನ್‌ ಐಡಿ

11:35 PM Dec 26, 2023 | Team Udayavani |

ಉಡುಪಿ: ಕೇಂದ್ರ ಸರಕಾರದ ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವೇಗ ಸಿಕ್ಕಿದ್ದು, ಪರಿಶೀಲನೆ ಪ್ರಕ್ರಿಯೆಯಾಗಿ ಗ್ರಾಮ ಪಂಚಾಯತ್‌ ಅಧ್ಯಕ್ಷರು ಇನ್ನಷ್ಟೇ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಬೇಕಿದೆ.

Advertisement

ಗ್ರಾ.ಪಂ.ಗಳಲ್ಲಿ ಇರುವ ಸಾಮಾನ್ಯ ಸೇವಾ ಕೇಂದ್ರಗಳು / ಆಧಾರ್‌ ಆಧಾರಿತ ಬಯೋಮೆಟ್ರಿಕ್‌ ದೃಢೀಕರಣೆಯೊಂದಿಗೆ ಪಿಎಂ ವಿಶ್ವಕರ್ಮ ಪೋರ್ಟಲ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲಾಗುತ್ತಿದೆ. ಈ ಎಲ್ಲ ಅರ್ಜಿಗಳ ಪರಿಶೀಲನೆಯಲ್ಲಿ ಗ್ರಾ.ಪಂ. ಅಧ್ಯಕ್ಷರ ಪಾತ್ರವೇ ಮುಖ್ಯ. ತಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಅಧ್ಯಕ್ಷರು ಪರಿಶೀಲಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು. ಅನಂತರ ಸಲ್ಲಿಕೆಯಾಗಿರುವ ಅರ್ಜಿ ಪರಿಶೀಲಿಸಿ ರಿಜೆಕ್ಟ್ ಅಥವಾ ಪ್ರೊಸೆಸ್‌ ಮಾಡಬಹುದಾಗಿದೆ. ಅಲ್ಲಿಂದ ಅರ್ಜಿ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿಗೆ ಹೋಗಲಿದೆ.

ಡಿ. 25ರ ಅಂತ್ಯಕ್ಕೆ ಉಡುಪಿ ಜಿಲ್ಲೆಯಲ್ಲಿ 3,060 ಹಾಗೂ ದ.ಕ. ಜಿಲ್ಲೆಯಲ್ಲಿ 5,280 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಉಡುಪಿಯ 155 ಗ್ರಾ.ಪಂ.ಗಳಲ್ಲಿ 136 ಗ್ರಾ.ಪಂ. ಅಧ್ಯಕ್ಷರು, ದ.ಕ.ದ 223 ಗ್ರಾ.ಪಂ.ಗಳಲ್ಲಿ 187 ಗ್ರಾ.ಪಂ. ಅಧ್ಯಕ್ಷರು ಆನ್‌ಬೋರ್ಡ್‌ ಆಗಿದ್ದಾರೆ. ಉಡುಪಿಯಲ್ಲಿ 16, ದ.ಕ.ದಲ್ಲಿ 36 ಗ್ರಾ.ಪಂ. ಅಧ್ಯಕ್ಷರು ಆನ್‌ಬೋರ್ಡ್‌ ಆಗಲು ಬಾಕಿಯಿದೆ. ಮಹಾನಗರ ಪಾಲಿಕೆಯಲ್ಲಿ ಮೇಯರ್‌ ಈ ಕಾರ್ಯ ಮಾಡಬೇಕಾಗುತ್ತದೆ. ನಗರಸಭೆ, ಪುರಸಭೆ, ಪ.ಪಂ.ಗಳಲ್ಲಿ ಸದ್ಯ ಅಧ್ಯಕ್ಷರು ಇಲ್ಲದೇ ಇರುವುರಿಂದ ಆಡಳಿತಾಧಿಕಾರಿಗಳು ಪ್ರಕ್ರಿಯೆ ನಿರ್ವಹಿಸುತ್ತಿದ್ದಾರೆ.

ನಿತ್ಯವೂ ಪರಿಶೀಲನೆ
ಯೋಜನೆಯ ಅರ್ಜಿ ಪರಿಶೀಲನೆ ಹೇಗೆ ಮಾಡಬೇಕು ಎಂದು ಎಲ್ಲ ಗ್ರಾ.ಪಂ.ಗಳ ಅಧ್ಯಕ್ಷರಿಗೆ ತರಬೇತಿ ನೀಡಲಾಗಿದೆ. ಹಾಗೆಯೇ ಕೈಗಾರಿಕೆ ಕೇಂದ್ರದಿಂದ ಇದಕ್ಕೆ ಸಂಬಂಧಿಸಿದ ಪಿಪಿಟಿಯನ್ನು ಗ್ರಾ.ಪಂ.ಗಳಿಗೆ ಕಳುಹಿಸಲಾಗಿದೆ. ಆನ್‌ಬೋರ್ಡ್‌ ಅನಂತರದಲ್ಲಿ ಗ್ರಾ.ಪಂ. ಅಧ್ಯಕ್ಷರು ನಿತ್ಯವೂ ತಮ್ಮ ಕಚೇರಿಗೆ ಬಂದು ಯೋಜನೆಯಡಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಬೇಕು. ಅರ್ಜಿ ಸಲ್ಲಿಸಿದವರು ನಿರ್ದಿಷ್ಟ ಕಸುಬು ಮಾಡುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ಅವರ ಮನೆಯಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಿ, ಕುಟುಂಬದ ಸದಸ್ಯರಲ್ಲಿ ಸರಕಾರಿ ನೌಕರರು ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಅರ್ಜಿ ಪ್ರೊಸೆಸ್‌ ಮಾಡಬೇಕಾಗುತ್ತದೆ.

ಸಂಘಟನೆಗಳ ಸಾಥ್‌
ಬಡಗಿ, ದೋಣಿ ತಯಾರಿಕೆ, ನೇಕಾರರು, ಕುಂಬಾರಿಕೆ, ಪಾದರಕ್ಷೆ ತಯಾರಿ, ಬೀಗ ತಯಾರಕರು, ಚಮ್ಮಾರರು, ಕಮ್ಮಾರರು, ಅಕ್ಕಸಾಲಿಗರು, ಟೈಲರ್‌, ಶಿಲ್ಪ ರಚನಾಕಾರರು, ಮೇಸ್ತ್ರಿ , ಆಟಿಕೆ ತಯಾರಕರು (ಸಾಂಪ್ರದಾಯಿಕ), ಬುಟ್ಟಿ ತಯಾರಿಸುವವರು, ದೋಬಿಗಳು, ಕೌÒರಿಕರು, ಮೀನುಗಾರಿಕೆ ಬಲೆ ಹೆಣೆಯುವವರು, ಹೂವಿನ ಮಾಲೆ ತಯಾರಕರಿಗೆ ವಿಶೇಷ ಕೌಶಲ ಒದಗಿಸಲು ಈ ಯೋಜನೆ ರೂಪಿಸಲಾಗಿದೆ.

Advertisement

ಕೇಂದ್ರ ಸರಕಾರದಿಂದ ಗೌರವಧನದೊಂದಿಗೆ ತರಬೇತಿ ಹಾಗೂ ಅನಂತರ ಸಾಲಸೌಲಭ್ಯ ಒದಗಿಸಲಾಗುತ್ತದೆ. ಈ ಎಲ್ಲ ವೃತ್ತಿಗೆ ಸಂಬಂಧಿಸಿದಂತೆ ಉಭಯ ಜಿಲ್ಲೆಗಳಲ್ಲಿ ಸಾಂಪ್ರದಾಯಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿರುವ ವೃತ್ತಿಗೆ ಸಂಬಂಧಪಟ್ಟ ಸಂಘಟನೆಗಳ ಪ್ರಮುಖರಿಗೆ ಮಾಹಿತಿ ನೀಡಲಾಗಿದೆ. ಸಂಘಟನೆಯವರು ತಮ್ಮ ಸದಸ್ಯರಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸುತ್ತಿದ್ದಾರೆ.

ಟೈಲರ್‌ಗಳು ಹೆಚ್ಚು ನೋಂದಣಿ
ಈಗಾಗಲೇ ನೋಂದಣಿ ಮಾಡಿ ಕೊಂಡಿರುವ 8,340 ಮಂದಿಯಲ್ಲಿ ಸುಮಾರು 3,000 ಟೈಲರ್‌ಗಳಿದ್ದಾರೆ. ಅನಂತರದಲ್ಲಿ ಬಡಗಿಯರು, ಚಿನ್ನದ ಕೆಲಸ ಮಾಡುವವರು ಹೀಗೆ ವಿವಿಧ ಹುದ್ದೆಯಲ್ಲಿರುವರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.

5,280 ಮಂದಿ ನೋಂದಣಿ
ಡಿ. 25ರ ಅಂತ್ಯಕ್ಕೆ ಉಡುಪಿ ಜಿಲ್ಲೆಯಲ್ಲಿ 3,060 ಹಾಗೂ ದ.ಕ. ಜಿಲ್ಲೆಯಲ್ಲಿ 5,280 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಗ್ರಾ.ಪಂ. ಅಧ್ಯಕ್ಷರ ಪಾತ್ರ ಮುಖ್ಯ. ಇದಕ್ಕಾಗಿ ಅವರಿಗೆ ಪ್ರತ್ಯೇಕ ಲಾಗಿನ್‌ ನೀಡಲಾಗುತ್ತದೆ. ಅಧ್ಯಕ್ಷರು ಆನ್‌ಬೋರ್ಡ್‌ ಆಗುವ ಮೂಲಕ ಅರ್ಜಿ ಪರಿಶೀಲಿಸಿ ಮುಂದಿನ ಹಂತಕ್ಕೆ ಕಳುಹಿಸಬೇಕು. ಇದಕ್ಕೆ ಬೇಕಾದ ತರಬೇತಿ/ ಮಾಹಿತಿ ನೀಡಲಾಗಿದೆ. ಅಧ್ಯಕ್ಷರ ಆನ್‌ಬೋರ್ಡ್‌ ಪ್ರಕ್ರಿಯೆ ಶೇ. 90ರಷ್ಟು ಪೂರ್ಣಗೊಂಡಿದೆ.
– ಗೋಕುಲ್‌ದಾಸ್‌ ನಾಯಕ್‌/ನಾಗರಾಜ ವಿ. ನಾಯಕ್‌,
ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರು, ದ.ಕ., ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next