ತುಮಕೂರು: ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜ.3ರಂದು ನಡೆಸಲು ಉದ್ದೇಶಿಸಿರುವ ರೈತರ ಸಮಾವೇಶದಲ್ಲಿ 2ನೇ ಹಂತದ ರೈತ ಸಮ್ಮಾನ್ ಯೋಜನೆಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡುವ ಸಾಧ್ಯತೆ ಇದ್ದು, ಇನ್ನೂ ಖಚಿತವಾಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಭಾನುವಾರ ಭೇಟಿ ನೀಡಿ ಕಾರ್ಯಕ್ರಮ ನಡೆಸುವ ಸ್ಥಳ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿದ್ಧಗಂಗಾ ಮಠಕ್ಕೆ ಭೇಟಿ: ತುಮಕೂರು ಪ್ರಗತಿಪರ ರೈತರ ಒಳಗೊಂಡ ಜಿಲ್ಲೆಯಾಗಿರುವುದರಿಂದ ಇಲ್ಲಿಂದಲೇ 2ನೇ ಹಂತದ ರೈತ ಸಮ್ಮಾನ್ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಬಯಸಿದ್ದಾರೆ. ಜ.3ರಂದು ಬೆಳಗ್ಗೆ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಶ್ರೀ ಮಠದಲ್ಲಿ ಲಿಂ. ಡಾ. ಶ್ರೀ ಶಿವಕುಮಾರ್ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು ಅರ್ಧ ಗಂಟೆ ಮಠದಲ್ಲಿ ಕಾಲ ಕಳೆಯಲಿದ್ದಾರೆ. ನಂತರ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ರೈತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಮಾವೇಶದಲ್ಲಿ ರಾಜ್ಯದ ವಿವಿಧೆಡೆಗಳಿಂದ ಸುಮಾರು 50 ಸಾವಿರಕ್ಕೂ ಅಧಿಕ ರೈತರು ಸೇರಲಿದ್ದಾರೆ. ಹಾಗಾಗಿ ಬಂದೋಬಸ್ತ್ ಕುರಿತು ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು. ತುಮಕೂರಿನಲ್ಲಿ ಫುಡ್‌ಪಾರ್ಕ್ ಸ್ಥಾಪನೆಯಾಗಿದ್ದು, ರೈತರ ಆದಾಯ ದ್ವಿಗುಣ ಮಾಡಬೇಕೆಂಬ ಆಶಯ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಸಲಾಗಿದೆ. ಈ ಗೊಂದಲ ಹೋಗಲಾಡಿಸುವ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಅಭಿಯಾನ ಕೈಗೊಂಡು ಜನರಲ್ಲಿ ಮೂಡಿರುವ ತಪ್ಪು ತಿಳಿವಳಿಕೆ ದೂರ ಮಾಡಲಾಗುವುದು.
ಸಾಮಾಜಿಕ ಜಾಲತಾಣದ ಮೇಲೆ ನಿಯಂತ್ರಣ ಹೇರುವ ಸಲುವಾಗಿ ಮತ್ತು ಸೈಬರ್ ಕ್ರೈಂ ನಿಯಂತ್ರಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಬಿ.ಸುರೇಶ್‌ಗೌಡ, ಡಾ. ಎಂ.ಆರ್. ಹುಲಿನಾಯ್ಕರ್, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ, ಬಿಜೆಪಿ ಮುಖಂಡ ಎಸ್.ಶಿವಪ್ರಸಾದ್ ಮತ್ತಿತರರಿದ್ದರು.
ಪರಿಸ್ಥಿತಿ ಶಾಂತಿಯುತ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದಿದ್ದ ಪ್ರತಿಭಟನೆಗಳು ತಣ್ಣಗಾಗುತ್ತಿದ್ದು, ರಾಜ್ಯದಲ್ಲಿ ಶಾಂತಿಯುತ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನಲ್ಲಿ ಗಲಭೆಗೆ ಕಾರಣರಾದವರ ಕುರಿತು ತನಿಖೆ ನಡೆಯುತ್ತಿದೆ. ಕೇರಳದಿಂದ ಬಂದವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಈ ಬಗ್ಗೆ ವಿಡಿಯೋಗಳು ಸಿಕ್ಕಿದೆ. ತನಿಖೆ ಸಂದರ್ಭ ಎಲ್ಲವನ್ನೂ ಪರಿಗಣಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಅಪರಾಧದಲ್ಲಿ ಭಾಗಿಯಾಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು. ಇಂದಿನ ಸ್ಥಿತಿಗೆ ಯಾರು ಕಾರಣ ಎಂಬುದು ದೇಶಕ್ಕೆ ಗೊತ್ತಿದೆ.
-ಬಸವರಾಜ್ ಬೊಮ್ಮಾಯಿ, ಗೃಹ ಸಚಿವ