ನವದೆಹಲಿ: ಕೆಲವು ದೇಶಗಳು ಗಡಿ ಪ್ರದೇಶದ ಭಯೋತ್ಪಾದನೆಯನ್ನೇ ದಾಳವನ್ನಾಗಿ ಮಾಡಿಕೊಂಡು, ಅದೇ ತಮ್ಮ ನೀತಿ ಎಂಬಂತೆ ಬಿಂಬಿಸಿಕೊಂಡು ಉಗ್ರರಿಗೆ ಆಶ್ರಯ ನೀಡುತ್ತಿರುವುದು ದ್ವಂದ್ವ ನಿಲುವಾಗಿದೆ…ಇದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಜು.04) ಶಾಂಘೈ ಸಹಕಾರ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಜಿನ್ ಪಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸಮ್ಮುಖದಲ್ಲೇ ಪಾಕ್ ವಿರುದ್ಧ ಚಾಟಿ ಬೀಸಿದ ಪರಿಯಾಗಿದೆ.
ಇದನ್ನೂ ಓದಿ:ಕಾವೇರಿ ನದಿ ತೀರದಲ್ಲಿ ಯುವಕರ ಮೋಜು, ಮಸ್ತಿ: ಗ್ರಾಮಸ್ಥರ ಆಕ್ರೋಶ
ಶಾಂಘೈ ಸಹಕಾರ ಒಕ್ಕೂಟ ಸಭೆಯನ್ನು ಈ ಬಾರಿ ಭಾರತ ಆಯೋಜಿಸಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ನಾಯಕರನ್ನು ಉದ್ದೇಶಿಸಿ ಮಾತನಾಡಿದರು.
“ ಭಯೋತ್ಪಾದನೆ ಎನ್ನುವುದು ದೇಶೀಯ ಹಾಗೂ ಜಾಗತಿಕ ಶಾಂತಿಗೆ ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಭಯೋತ್ಪಾದನಾ ಪಿಡುಗನ್ನು ತೊಡೆದು ಹಾಕಲು ಒಗ್ಗಟ್ಟಿನ ಸಹಕಾರದ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ತಿಳಿಸಿದರು.
ಯಾವುದೇ ವಿಧದ ಭಯೋತ್ಪಾದನೆ ಇರಲಿ ಅದನ್ನು ಒಗ್ಗಟ್ಟಾಗಿ ಎದುರಿಸಬೇಕಾಗಿದೆ. ಭಯೋತ್ಪಾದನೆ ನಿರ್ಮೂಲನೆ ಮಾಡುವಲ್ಲಿ ಇಬ್ಬಗೆ ನೀತಿ ಹೊಂದಿರಬಾರದು ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದರು.
ರಷ್ಯಾದಲ್ಲಿ ನಡೆದ ದಂಗೆಯ ಬಳಿಕ ಇದೇ ಮೊದಲ ಬಾರಿಗೆ ಪುಟಿನ್ ಸಭೆಯೊಂದರಲ್ಲಿ ಭಾಗಿಯಾಗಿದ್ದಾರೆ. ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ, ಉಕ್ರೇನ್ ಯುದ್ಧ, ಸದಸ್ಯ ರಾಷ್ಟ್ರಗಳ ನಡುವಿನ ಸಂಪರ್ಕ, ವ್ಯಾಪಾರ ವೃದ್ಧಿ, ಚೀನಾದ ಕಿರಿಕ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.