ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ತಮ್ಮ ಹೆಸರಿಗೆ ಮೊದಲು ಅಂಟಿಸಿಕೊಂಡಿದ್ದ ‘ಚೌಕೀದಾರ್’ ಪದವನ್ನು ಇಂದು ಗುರುವಾರ ತೆಗೆದು ಹಾಕಿದ್ದಾರೆ. ಆದರೆ ಈ ಪದದ ಸ್ಫೂರ್ತಿಯು ತನಗೆ ಅವಿಭಾಜ್ಯವಾಗಿರುತ್ತದೆ ಎಂದು ಹೇಳಿದ್ದಾರೆ.
ಮೋದಿ ಅವರು ತಮ್ಮ ಹೆಸರಿಗೆ ಚೌಕೀದಾರ್ ಎಂಬ ಪೂರ್ವ-ಪದವನ್ನು ಕಳೆದ ಮಾರ್ಚ್ 17ರಂದು ಸೇರಿಸಿಕೊಂಡಿದ್ದರು. ಇದರ ಮುನ್ನಾ ದಿನ ಅವರು ಸಾಮಾಜಿಕ ಮಾಧ್ಯಮದಲ್ಲಿ ‘ಮೈ ಭೀ ಚೌಕೀದಾರ್’ ಎಂಬ ಆಂದೋಲನವನ್ನು ಆರಂಭಿಸಿದ್ದರು.
“ಚೌಕೀದಾರ್ ಸ್ಫೂರ್ತಿಯನ್ನು ಮುಂದಿನ ಮಟ್ಟಕ್ಕೆ ಒಯ್ಯುವ ಕಾಲ ಈಗ ಒದಗಿ ಬಂದಿದೆ. ಈ ಸ್ಫೂರ್ತಿಯನ್ನು ಪ್ರತೀ ಕ್ಷಣದಲ್ಲೂ ಉಳಿಸಿಕೊಂಡು ದೇಶದ ಪ್ರಗತಿಗಾಗಿ ದುಡಿಯುವುದನ್ನು ಮುಂದುವರಿಸುವೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಹೆಸರಿನೊಂದಿಗಿನ ಚೌಕೀದಾರ್ ಪೂರ್ವಪದವನ್ನು ಮೋದಿ ತೆಗೆದು ಹಾಕಿರುವುದನ್ನು ಅನಸರಿಸಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಜನಾಥ್ ಸಿಂಗ್, ಅರುಣ್ ಜೇತ್ಲಿ ಸೇರಿದಂತೆ ಅನೇಕ ನಾಯಕರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಅದನ್ನು (ಚೌಕೀದಾರ್ ಪೂರ್ವಪದವನ್ನು) ತೆಗೆದು ಹಾಕಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ 301 ಸ್ಥಾನ ಗೆಲ್ಲಲು ಮುಂದಾಗಿದ್ದು ಅವರ ನೇತೃತ್ವದ ಎನ್‌ಡಿಎ 350 ಸೀಟುಗಳನ್ನು ಗೆಲ್ಲುವುದು ಬಹುತೇಕ ಖಚಿತವಾಗಿದೆ.
ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ರಫೇಲ್ ಫೈಟರ್ ಜೆಟ್ ಭ್ರಷ್ಟಾಚಾರ ಆರೋಪ ಮಾಡಿ “ಚೌಕೀದಾರ್ ಚೋರ್ ಹೈ’ ಎಂದು ಪದೇ ಪದೇ ಹೇಳಲು ಆರಂಭಿಸಿದುದನ್ನು ಅನುಸರಿಸಿ ಮೋದಿ ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ “ಚೌಕೀದಾರ್” ಪೂರ್ವಪದ ಸೇರಿಸಿಕೊಂಡಿದ್ದರು.
‘ಚೌಕೀದಾರ್ ಚೋರ್ ಹೈ’ ಎಂದು ಆರೋಪಿಸುವ ಭರದಲ್ಲಿ ರಾಹುಲ್ ಗಾಂಧಿ ಅವರು “ಸುಪ್ರೀಂ ಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಮೋದಿ ಚೌಕೀದಾರ್ ಚೋರ್ ಹೈ ಎಂದಿದೆ’ ಎಂದು ಹೇಳಿ ವಿವಾದಕ್ಕೆ ಗುರಿಯಾಗಿ ಕೊನೆಗೆ ತನ್ನ ಪ್ರಮಾದಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದರು.