ಲಕ್ನೋ/ವಾರಾಣಸಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ಕೃಷಿ ಸಂಬಂಧಿ ಕಾಯ್ದೆ ವಿರೋಧಿ ಪಂಜಾಬ್, ಹರ್ಯಾಣ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ(ನವೆಂಬರ್ 30, 2020), ನೂತನ ಕಾಯ್ದೆ ರೈತರಿಗೆ ಹೆಚ್ಚಿನ ಬಲ ನೀಡಲಿದೆ. ಅಲ್ಲದೇ ಹೆಚ್ಚಿನ ಆಯ್ಕೆ ಮತ್ತು ಕಾನೂನು ರಕ್ಷಣೆ ಕೂಡ ಸಿಗಲಿದೆ ಎಂದು ಹೇಳುವ ಮೂಲಕ ಕೇಂದ್ರದ ನೂತನ ಕೃಷಿ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ವಿರೋಧ ಪಕ್ಷಗಳು ರೈತರ ಕಾಯ್ದೆಯ ಬಗ್ಗೆ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದು, ರೈತರು ಬೀದಿಗಿಳಿಯುವಂತೆ ಮಾಡಿವೆ. ಈ ಮೊದಲು ರೈತರ ಸಾಲಮನ್ನಾದ ಪ್ಯಾಕೇಜ್ ಘೋಷಿಸಲಾಗುತ್ತಿತ್ತು. ಆದರೆ ಇಂತಹ ಲಾಭದ ಯೋಜನೆ ಯಾವತ್ತೂ ರೈತರಿಗೆ ತಲುಪುವಂತೆ ಮಾಡಿಲ್ಲ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.
ರೈತರ ಅಭಿವೃದ್ಧಿಗಾಗಿ ಕೈಗೊಂಡ ನಮ್ಮ ನಿರ್ಧಾರ ಸರಿಯಾಗಿದೆ. ಇದು ರೈತರಿಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಲಿದೆ. ಇಂತಹ ಅನುಕೂಲ ಇನ್ಮುಂದೆ ಸಾಕಾರಗೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.
ಈ ಹಿಂದೆ ರೈತರಿಗೆ ಹೆಚ್ಚಿನ ಲಾಭವಾಗುವುದನ್ನು ತಪ್ಪಿಸಿ, ಮಧ್ಯವರ್ತಿಗಳಿಗೆ ಲಾಭ ಮಾಡಿಕೊಡಲಾಗುತ್ತಿತ್ತು. ಆದರೆ ನೂತನ ಕೃಷಿ ಕಾಯ್ದೆ ರೈತರಿಗೆ ಹೆಚ್ಚಿನ ಲಾಭ ತಂದುಕೊಡಲಿದೆ. ಮುಂದಿನ ದಿನಗಳಲ್ಲಿ ಹೊಸ ಕಾಯ್ದೆ ರೈತರಿಗೆ ತಂದುಕೊಡಲಿರುವ ಲಾಭವನ್ನು ನಾವು ಕಾಣಬಹುದಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಹೊಸ ಕಾಯ್ದೆಯಿಂದ ರೈತರಿಗೆ ಮಾರುಕಟ್ಟೆಗೆ ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಕೂಡಾ ಸೇರಿದೆ. ಒಂದು ವೇಳೆ ಯಾರಾದರೂ ಹಳೆಯ ವ್ಯವಸ್ಥೆಯೇ ಉತ್ತಮವಾಗಿತ್ತು ಎಂದು ಭಾವಿಸಿದರೆ, ಈ ಹೊಸ ಕಾಯ್ದೆಯನ್ನು ಯಾರಾದರೂ ಹೇಗೆ ತಡೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ಮೊದಲು ಮಂಡಿ(ಮಾರುಕಟ್ಟೆ)ಯ ಹೊರಭಾಗದಲ್ಲಿ ಯಾವುದೇ ವ್ಯವಹಾರ ನಡೆಸಿದರು ಅದನ್ನು ಅಕ್ರಮ ಎಂದು ಪರಿಗಣಿಸಲಾಗುತ್ತಿತ್ತು. ಇದು ಸಣ್ಣ ಹಿಡುವಳಿದಾರ ರೈತರಿಗೆ ವಿರುದ್ಧವಾಗಿತ್ತು. ಅವರಿಗೆ ಮಂಡಿ ತಲುಪಲು ಸಾಧ್ಯವಿಲ್ಲವಾಗಿತ್ತು. ಆದರೆ ಹೊಸ ಕಾಯ್ದೆಯಿಂದ ಸಣ್ಣ ರೈತರು ಕೂಡಾ ಮಂಡಿಯ ಹೊರಭಾಗದಲ್ಲಿ ಕಾನೂನು ಬದ್ಧವಾಗಿ ಬೆಳೆ ಮಾರಾಟ ಮಾಡುವ ಅವಕಾಶ ಇದೆ. ಹೊಸ ಕಾಯ್ದೆ ರೈತರಿಗೆ ಹಲವು ಆಯ್ಕೆಗಳನ್ನು ನೀಡಿರುವುದನ್ನು ಮನಗಾಣಬೇಕು ಎಂದು ಪ್ರಧಾನಿ ಮೋದಿ ಅವರು ವಾರಾಣಸಿಯಲ್ಲಿ ನೂತನವಾಗಿ ನಿರ್ಮಿಸಿದ ಆರು ಲೇನ್ ಗಳ ರಾಷ್ಟ್ರೀಯ ಹೆದ್ದಾರಿಯನ್ನು ಉದ್ಘಾಟಿಸಿ ಮಾತನಾಡಿದ್ದರು.