Advertisement

ಪ್ರಧಾನ ಮಂತ್ರಿ ಕುರ್ಚಿ ಕುಟುಂಬದ ಆಸ್ತಿಯೇ?

06:00 AM May 10, 2018 | |

ಚಿಕ್ಕಮಗಳೂರು/ಕೋಲಾರ: ಕರ್ನಾಟಕ ಓಟಿನ ಬೇಟೆಗೆ ಇನ್ನೆರಡು ದಿನ ಬಾಕಿ ಉಳಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಡೇ ದಿನದ ರ್ಯಾಲಿಯಲ್ಲಿ ಕಾಂಗ್ರೆಸ್‌ ವಿರುದ್ಧ ಮತ್ತಷ್ಟು ವಾಗ್ಧಾಳಿ ನಡೆಸಿದ್ದಾರೆ.

Advertisement

ಚಿಕ್ಕಮಗಳೂರಿನ ರ್ಯಾಲಿಯಲ್ಲಿ ನೇರವಾಗಿಯೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನೇ ಗುರಿಯಾಗಿಸಿಕೊಂಡ ಅವರು, ಕಾಂಗ್ರೆಸ್‌ ಪಕ್ಷ ತಮ್ಮ ಕುಟುಂಬದ್ದು ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವ ಕೆಲವರು ಪ್ರಧಾನ ಮಂತ್ರಿ ಕುರ್ಚಿ ತನ್ನ ಕುಟುಂಬದ ಆಸ್ತಿ ಎಂದು ಭಾವಿಸಿದ್ದಾರೆ ಎಂದು ಟಾಂಗ್‌ ನೀಡಿದರು. ಈ ಕುರ್ಚಿಯಲ್ಲಿ ಬೇರೆ ಯಾರೂ ಅದರಲ್ಲಿ ಕೂರುವ ಹಾಗಿಲ್ಲ. 2004 ರಿಂದ 10 ವರ್ಷಗಳ ಕಾಲ ಸೋನಿಯಾ ಹಾಗೂ ಮನಮೋಹನ್‌ಸಿಂಗ್‌ ಈ ದೇಶವನ್ನು ಆಳಿದರು. ಆದರೆ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್‌ ಪರಾಭವಗೊಂಡು ಕೇವಲ 40 ಸ್ಥಾನ ಪಡೆಯಿತು. ಆದರೂ ಈಗಲೂ ಈ ಕುಟುಂಬದ ಅಹಂಕಾರ ಕಡಿಮೆಯಾಗಲಿಲ್ಲ. 2019 ರಲ್ಲಿ ನಾನೇ ಪ್ರಧಾನ ಮಂತ್ರಿ ಎಂದು ಹೇಳುವಷ್ಟು ಅಹಂ ಇದೆ ಎಂದು ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ಸಿಕ್ಕಿರುವ ಭಾರಿ ಪ್ರಮಾಣದ ಮತಚೀಟಿಗಳ ಬಗ್ಗೆಯೂ ಮಾತನಾಡಿದ ಅವರು, ಅಧಿಕಾರ ಹಿಡಿಯಲು ಕಾಂಗ್ರೆಸ್‌ ಯಾವ ಮಾರ್ಗ ಹಿಡಿಯಲು ಬೇಕಾದರೂ ಮುಂದಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಆರೋಪಿಸಿದರು.

ಸಂವಿಧಾನ ಬದಲಿಸಲ್ಲ: ಕೋಲಾರದಲ್ಲಿ ಮಾತನಾಡಿದ ಮೋದಿ ಅವರು, ದೇಶದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್‌ ಪಕ್ಷ ಸಂವಿಧಾನ ಬದಲಾವಣೆಯಾಗುತ್ತದೆ. ಮೀಸಲಾತಿ ರದ್ದಾಗುತ್ತದೆ ಎಂದು ಗುಲ್ಲೆಬ್ಬಿಸಿತ್ತು. ಆದರೆ, ವಾಜಪೇಯಿ ಸರ್ಕಾರ ಅಂತಹ ಕೆಲಸವನ್ನು ಮಾಡಲಿಲ್ಲ ಎಂದರು. ಈಗಲೂ ಅದೇ ರೀತಿಯ ಸುಳ್ಳಿನ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ, ಬಿಜೆಪಿ ಸರಕಾರ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ. ಮೀಸಲಾತಿಯನ್ನು ರದ್ದುಪಡಿಸುವುದಿಲ್ಲ. ಇದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಅಧಿಕಾರದಲ್ಲಿ ಪರಿಶಿಷ್ಟ ಜಾತಿ, ವರ್ಗದ ಕಾಯ್ದೆ ಬಲಪಡಿಸಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಅಂಬೇಡ್ಕರ್‌ಗೆ ಅವಮಾನ: ಸಂವಿಧಾನ ಶಿಲ್ಪಿಗೆ ಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್‌ ಎಂದ ಮೋದಿ ಅವರು, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ತಂದೆಗೆ ಮಗಳು, ಅಮ್ಮನಿಗೆ ಮಗ, ಗಂಡನಿಗೆ ಹೆಂಡತಿ ಭಾರತ ರತ್ನ ನೀಡುವ ಮೂಲಕ ಒಂದೇ ಕುಟುಂಬದಲ್ಲಿ ನಾಲ್ವರು ಭಾರತ ರತ್ನಗಳು ಇರುವಂತೆ ಮಾಡಿಕೊಂಡರು. ಸರ್ಕಾರದ ಎಲ್ಲ ಯೋಜನೆಗಳಿಗೂ ಅವರದೇ ಕುಟುಂಬದ ಸದಸ್ಯರ ಹೆಸರುಗಳನ್ನು ಇಟ್ಟುಕೊಂಡರು. ಆದರೆ, ವಾಜಪೇಯಿ ಸರಕಾರ ಅಂಬೇಡ್ಕರ್‌ರಿಗೆ ಭಾರತ ರತ್ನ ಗೌರವ ನೀಡಿತು ಎಂದರು.

Advertisement

ಕಾಂಗ್ರೆಸ್‌ನ ಆರು ರೋಗಾಣು
ಕಾಂಗ್ರೆಸ್‌ ಸಂಸ್ಕೃತಿ, ಕೋಮುವಾದ, ಜಾತೀಯತೆ, ಅಪರಾಧ, ಭ್ರಷ್ಟಾಚಾರ ಹಾಗೂ ಗುತ್ತಿಗೆದಾರಿಕೆ ಎಂಬ ಆರು ರೋಗಾಣುಗಳು ಕರ್ನಾಟಕದ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡಿವೆ ಎಂದು ಮೋದಿ ಟೀಕಿಸಿದ್ದಾರೆ. ಕಾಂಗ್ರೆಸ್‌ನ ದೆಹಲಿ ದರ್ಬಾರಿಗೆ ಬಹು ಪರಾಖ್‌ ಹೇಳುವ ಹಾಗೂ ಕಪ್ಪು ಕಾಣಿಕೆ ಒಪ್ಪಿಸುವ ಜನರು ದೇಶದ ವಿವಿಧ ರಾಜ್ಯಗಳಲ್ಲಿದ್ದಾರೆ. ಕರ್ನಾಟಕದಲ್ಲೂ ಇಂತಹದ್ದೇ ಕೆಟ್ಟ ಸರಕಾರ ಆಡಳಿತ ನಡೆಸಿದೆ. ಈ ಸರ್ಕಾರವನ್ನು ತೊಲಗಿಸಿ ರಾಜ್ಯದ ಪ್ರಗತಿಗೆ ಜನತೆ ಸಹಕರಿಸಬೇಕು. ಹೆಸರು ಆಧಾರಿತ ಕಾಂಗ್ರೆಸ್‌ ಸಂಸ್ಕೃತಿಯನ್ನು ತೊಲಗಿಸಿ, ಕೆಲಸ ಆಧಾರಿತ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next