Advertisement

ಯೋಗ ಮಾರ್ಗ ಗಮನ,ಆಯುರ್ವೇದ ಮಹತ್ವ ಸಾರಿದ ಪ್ರಧಾನಿ

01:24 AM Jun 01, 2020 | Sriram |

ಹೊಸದಿಲ್ಲಿ: ಕೋವಿಡ್‌-19 ನಮ್ಮ ಉಸಿರಾಟ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ. ಯೋಗಾಭ್ಯಾಸದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಸಮುದಾಯ, ರೋಗ ನಿರೋಧಕತೆ ಮತ್ತು ಏಕತೆಗೆ ಸಹಕಾರಿ. ಹಾಗಾಗಿ ಯೋಗ, ಆಯುರ್ವೇದಗಳಿಂದ ನಾವು ಕೋವಿಡ್‌-19 ವನ್ನು ಸೋಲಿಸಬಹುದು.

Advertisement

– ಇವು ಪ್ರಧಾನಿ ಮೋದಿ ಯೋಗ, ಆಯುರ್ವೇದದ ಬಗೆಗೆ ಆಡಿರುವ ಮಾತುಗಳು. ರವಿವಾರ ಆಕಾಶವಾಣಿಯಲ್ಲಿ ತಾವು ನಡೆಸಿಕೊಡುವ “ಮನ್‌ ಕೀ ಬಾತ್‌’ನ 65ನೇ ಸಂಚಿಕೆಯಲ್ಲಿ ಮಾತನಾಡಿ ಯೋಗ, ಆಯುರ್ವೇದವನ್ನು ಅಳವಡಿಸಿಕೊಳ್ಳಲು ದೇಶವಾಸಿಗಳಿಗೆ ಪರೋಕ್ಷವಾಗಿ ಕರೆ ನೀಡಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶ್ವಕ್ಕೆ ಯೋಗದ ಮಹತ್ವವನ್ನು ಸಾರಿದೆ. ಆರೋಗ್ಯದಿಂದಿರಲು ಮತ್ತು ಸುಖೀ ಜೀವನ ನಡೆಸಲು ಯೋಗ ಅತ್ಯುಪಯುಕ್ತ ಸಾಧನ ಎಂಬುದನ್ನು ಜನ ಅರಿತುಕೊಂಡಿದ್ದಾರೆ. ಈ ಭಾರತೀಯ ವಿದ್ಯೆಯನ್ನು ಕಲಿಯಲು ಹಾಲಿವುಡ್‌ನಿಂದ ಹರಿದ್ವಾರದ ವರೆಗೆ ಜನರು ಉತ್ಸುಕರಾಗಿದ್ದಾರೆ ಎಂದರು.

ಪ್ರಾಣಾಯಾಮದಿಂದ ಉಸಿರಾಟ ವ್ಯವಸ್ಥೆಯನ್ನು ಸದೃಢಗೊಳಿಸಬಹುದು. ಯಾರಿಗೂ ಗೊತ್ತಿರದ ವಿಚಾರವೊಂದನ್ನು ನಾನು ತಿಳಿಸುತ್ತೇನೆ. ಅನೇಕ ವಿಶ್ವ ನಾಯಕರ ಜತೆಗೆ ಮಾತುಕತೆ ನಡೆಸುವಾಗ ಅನೇಕರು ಯೋಗ ಮತ್ತು ಆಯುರ್ವೇದಗಳ ಬಗ್ಗೆ ಹೆಚ್ಚು ಆಸಕ್ತಿಯಿಂದ ನನ್ನ ಬಳಿ ಮಾಹಿತಿ ಪಡೆಯುತ್ತಿದ್ದರು. ಈಗ ಅನೇಕ ನಾಯಕರು ಕೋವಿಡ್‌-19 ವನ್ನು ನಿಗ್ರಹಿಸಲು ಯೋಗ ಮತ್ತು ಆಯುರ್ವೇದ ಸಹಕಾರಿಯಲ್ಲವೆ ಎಂದು ಪ್ರಶ್ನಿಸುತ್ತಿದ್ದಾರೆ. ಈಗೀಗಂತೂ ಎಲ್ಲರೂ ಯೋಗ, ಆಯುರ್ವೇದಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದಿದ್ದಾರೆ.

ಮುಂಜಾಗ್ರತೆ ಪಾಲಿಸೋಣ
ಕೋವಿಡ್‌-19 ವೈರಾಣು ನಮ್ಮೊಂದಿಗೇ ಜೀವಿಸುತ್ತಿರುತ್ತದೆ. ನಾವೂ ಅದರೊಂದಿಗೆ ಬದುಕುವುದನ್ನು ಕಲಿಯಬೇಕಷ್ಟೆ. ಎಚ್ಚರಿಕೆಯಿಂದ ಇರುವುದು ಮುಖ್ಯ. ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ಆರು ಅಡಿ ಅಂತರ ಕಾಯ್ದುಕೊಳ್ಳುವುದು ಕಷ್ಟವೇನೂ ಅಲ್ಲ. ಅವನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕರಾಗಿರೋಣ ಎಂದು ಮೋದಿ ಕರೆ ನೀಡಿದರು.

Advertisement

ಕೋವಿಡ್‌-19 ಎದುರಿಸಿದ ರೀತಿ ವಿಭಿನ್ನ
ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಕೋವಿಡ್‌-19 ಎದುರಿಸಿದ ರೀತಿ ತೀರಾ ವಿಭಿನ್ನ. ಏಕೆಂದರೆ ನಮ್ಮದು ಅತೀ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರ. ಆದರೂ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ನಾವು ಸಫ‌ಲರಾಗಿದ್ದೇವೆ. ನಮ್ಮಲ್ಲಿ ಮರಣ ಪ್ರಮಾಣವೂ ತೀರಾ ಕಡಿಮೆಯಿದೆ ಎಂದಿದ್ದಾರೆ.

ಸೇವಾಶಕ್ತಿಯ ಅನಾವರಣ
ಕೋವಿಡ್‌-19 ಕಾಲದಲ್ಲಿ ನಾವು ಕಂಡ ಮತ್ತೂಂದು ಆಸಕ್ತಿದಾಯಕ ವಿಚಾರವೇನೆಂದರೆ ನಮ್ಮಲ್ಲಿರುವ ಸೇವಾಶಕ್ತಿ. ಲಾಕ್‌ಡೌನ್‌ನ ಅವಧಿಯಲ್ಲಿ ಭಾರತೀಯ ಸೇವಾಶಕ್ತಿ ಏನೆಂಬುದು ಇಡೀ ವಿಶ್ವಕ್ಕೆ ತಿಳಿಯಿತು. ಮಹಿಳಾ ಸ್ವ-ಸಹಾಯ ಗುಂಪುಗಳ ಪರಿಶ್ರಮ, ತ್ಯಾಗ, ಸೇವೆ ಅತ್ಯಂತ ಶ್ಲಾಘನೀಯ ಎಂದು ಪ್ರಧಾನಿ ತಿಳಿಸಿದರು.

ಯುವ ವಿಜ್ಞಾನಿಗಳ ಸ್ಮರಣೆ
ಕೋವಿಡ್‌-19 ಭೀತಿಯ ನಡುವೆಯೇ ಅದನ್ನು ಗೆಲ್ಲಲು ಬೇಕಾದ ಅನೇಕ ಆವಿಷ್ಕಾರಗಳನ್ನು ನಮ್ಮ ದೇಶದ ಯುವ ಜನತೆ ಮಾಡಿದ್ದಾರೆ.
ಮಧುರೈಯ ಕೆ.ಸಿ. ಮೋಹನ್‌, ಅಗರ್ತಲಾದ ಗೌತಮ್‌ ದಾಸ್‌, ಪಠಾಣ್‌ಕೋಟ್‌ನ ದಿವ್ಯಾಂಗರಾದ ರಾಜು, ನಾಸಿಕ್‌ನ ರಾಜೇಂದ್ರ ಯಾದವ್‌ ಹಲವಾರು ಸಲಕರಣೆಗಳನ್ನು ಆವಿಷ್ಕರಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಎಂದರು.

ಆತ್ಮನಿರ್ಭರ ಭಾರತಕ್ಕೆ ಕೈ ಜೋಡಿಸಿ
ನಾವು ಕೋವಿಡ್‌-19 ವಿರುದ್ಧ ಪೂರ್ಣ ಜಯ ಸಾಧಿಸಿಲ್ಲ. ಜತೆಯಲ್ಲೇ ದೇಶದ ಆರ್ಥಿಕತೆಗೆ ಒದಗಿರುವ ಅಗ್ನಿ ಪರೀಕ್ಷೆಯನ್ನೂ ಗೆಲ್ಲಬೇಕಿದೆ. ಆತ್ಮ ನಿರ್ಭರ ಭಾರತವನ್ನು ಕಟ್ಟಲು ಶ್ರಮಿಸಬೇಕಿದೆ. ಹಾಗಾಗಿ ಒಗ್ಗಟ್ಟಿನಿಂದ ಆ ಕಡೆಗೆ ಹೆಜ್ಜೆ ಹಾಕೋಣ. ಇದು ಜನರಿಂದಲೇ ರೂಪಿತವಾದ ಜನಾಂದೋಲವೆಂಬಂತೆ ಮುನ್ನಡೆಯಲಿ ಎಂದರು.

ಕೂಲಿಕಾರರ ನೋವು ಅಷ್ಟಿಷ್ಟಲ್ಲ
ಕೋವಿಡ್‌-19 ಬಾಧೆಗೆ ಎಲ್ಲ ಕ್ಷೇತ್ರಗಳೂ ನಲುಗಿವೆ. ತೀರಾ ಕಷ್ಟ ಅನುಭವಿಸಿದ್ದು ಕೂಲಿಕಾರರು ಮತ್ತು ಬಡವರು. ಅವರು ಪಟ್ಟ ಕಷ್ಟ, ಯಾತನೆ, ಅಗ್ನಿಪರೀಕ್ಷೆಗಳನ್ನು ಬಣ್ಣಿಸಲು ಪದಗಳಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ನೆರವಾದ ರೈಲ್ವೇಗೆ ನಾನು ಆಭಾರಿ. ಆ ಇಲಾಖೆಯ ಸಿಬಂದಿಯೂ ಆರೋಗ್ಯವೀರರೇ ಎಂದಿದ್ದಾರೆ ಪ್ರಧಾನಿ.

Advertisement

Udayavani is now on Telegram. Click here to join our channel and stay updated with the latest news.

Next