ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ 2022ನೇ ಸಾಲಿನ ಮೊದಲ ವಿದೇಶ ಪ್ರಯಾಣದ ಪಟ್ಟಿ ಬಿಡುಗಡೆಯಾಗಿದ್ದು, ಮೇ 2ರಿಂದ 4ರವರೆಗೆ ಜರ್ಮನಿ, ಡೆನ್ಮಾರ್ಕ್ ಹಾಗೂ ಫ್ರಾನ್ಸ್ ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ (ಏಪ್ರಿಲ್ 27) ತಿಳಿಸಿದೆ.
ಇದನ್ನೂ ಓದಿ:
ಕೋವಿಡ್ ಭೀತಿ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ: ಸಿಎಂಗಳೊಂದಿಗೆ ಪ್ರಧಾನಿ ಸಭೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, 2022ರಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ವಿದೇಶ ಪ್ರವಾಸ ಇದಾಗಿದೆ. ಬರ್ಲಿನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿಯ ಫೆಡರಲ್ ಚಾನ್ಸೆಲರ್ ಓಲಾಫ್ ಸ್ಕೋಲ್ಝ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ನಂತರ ಉಭಯ ನಾಯಕರು ಆರನೇ ಆವೃತ್ತಿಯ ಭಾರತ-ಜರ್ಮನಿ ನಡುವಿನ ಐಜಿಸಿ (ಇಂಟರ್ ಗವರ್ನಮೆಂಟಲ್ ಕನ್ಸ್ ಸಲ್ಟೇಶನ್ಸ್ ) ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ದ್ವಿಪಕ್ಷೀಯ ಐಜಿಸಿ ಸಭೆಯಲ್ಲಿ ಉಭಯ ದೇಶಗಳ ಹಲವಾರು ಸಚಿವರು ಪಾಲ್ಗೊಳ್ಳಲಿದ್ದಾರೆ.
ಜರ್ಮನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಅವರೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ವರದಿ ಹೇಳಿದೆ. 2021ರಲ್ಲಿ ಭಾರತ ಮತ್ತು ಜರ್ಮನಿ ನಡುವಿನ ರಾಜತಾಂತ್ರಿಕ ಸಂಬಂಧದ 70ನೇ ವರ್ಷಾಚರಣೆ ಆಚರಿಸಿತ್ತು.
ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫೆಡರಿಕ್ ಸೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೋಪನ್ ಹೇಗ್ ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ನಂತರ ಡೆನ್ಮಾರ್ಕ್ ಆಯೋಜನೆಯ 2ನೇ ಭಾರತ-ನೋರ್ಡಿಕ್ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.