ಹೊಸದಿಲ್ಲಿ : “ಮುಸ್ಲಿಂ ಸಮುದಾಯದವರು ತ್ರಿವಳಿ ತಲಾಕ್ ವಿಷಯವನ್ನು ರಾಜಕೀಯಗೊಳಿಸಬಾರದು; ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಂಡು ಅವರು ಮುಂದೆ ಬರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಸಮುದಾಯದವರನ್ನು ಆಗ್ರಹಿಸಿದ್ದಾರೆ.
ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಕ್ ಪದ್ಧತಿಯನ್ನು ವಿರೋಧಿಸುತ್ತಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುವುದರ ವಿರುದ್ಧ ಮುಸ್ಲಿಂ ಸಮುದಾಯದವರು ಧ್ವನಿ ಎತ್ತಬೇಕು ಎಂದು ಮೋದಿ ಕರೆ ನೀಡಿದರು.
ಪ್ರಧಾನಿ ಮೋದಿ ಅವರು ಪ್ರಖ್ಯಾತ ತತ್ವಜ್ಞಾನಿ ಬಸವೇಶ್ವರರ ಜನ್ಮ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
“ದೇಶದಲ್ಲಿನ ಮುಸ್ಲಿಂ ಹೆಣ್ಣು ಮಕ್ಕಳು ತ್ರಿವಳಿ ತಲಾಕ್‌ನಿಂದ ಪಡುವ ಪಾಡನ್ನು ಶಾಶ್ವತವಾಗಿ ನಿವಾರಿಸುವುದಕ್ಕೆ ನಾನು ಹೋರಾಡುತ್ತೇನೆ; ನನ್ನ ಸರಕಾರ ಈ ಪ್ರಾಚೀನ ಕಾನೂನಿಗೆ ಅಂತ್ಯವನ್ನು ಹೇಳಲಿದೆ’ ಎಂದು ಮೋದಿ ನುಡಿದರು.
40 ನಿಮಿಷಗಳ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಮಹಿಳೆಯರ ಸಶಕ್ತೀಕರಣ, ಸಮಾನತೆ ಮತ್ತು ಉತ್ತಮ ಆಡಳಿತೆಯ ಬಗ್ಗೆ ಮಾನಾಡಿದರು.