ಚಾಮರಾಜನಗರ: ಹುಲಿ ಯೋಜನೆಯ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸಫಾರಿ ನಡೆಸಲಿದ್ದು, ವಾಯುಸೇನೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಬಂಡೀಪುರಕ್ಕೆ ಆಗಮಿಸಿದರು.
ಬೆಳಿಗ್ಗೆ ಸುಮಾರು 7.20ರಲ್ಲಿ ಬಂಡೀಪುರ ಹೊರ ವಲಯದ ಮೇಲುಕಾಮನಹಳ್ಳಿಯಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್ ಗೆ ಮೋದಿಯವರಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಯಿತು. ಪ್ರಧಾನ ಮಂತ್ರಿ ಮೋದಿ ಅವರನ್ನು ಹಿರಿಯ ಅರಣ್ಯಾಧಿಕಾರಿಗಳಾದ ಡಿಡಿಜಿ ಸುಬ್ರಹ್ಮಣ್ಯ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಐಜಿಪಿ ಮುರಳಿ ಸ್ವಾಗತಿಸಿದರು.
ಹಸಿರು ಜಾಕೆಟ್, ಖಾಕಿ ಪ್ಯಾಂಟ್, ಕಪ್ಪು ಶೂ ಧರಿಸಿದ ಪ್ರಧಾನಿಯವರು, ಹೆಲಿಕಾಪ್ಟರ್ ನಿಂದ ಇಳಿದು ಕಾರಿನಲ್ಲಿ ಬಂಡೀಪುರದ ಹಳೆಯ ಸ್ವಾಗತ ಕೇಂದ್ರಕ್ಕೆ ತೆರಳಿದರು.
ಬಂಡೀಪುರದಲ್ಲಿ ಸುಮಾರು 12 ಕಿ.ಮೀ. ಸಫಾರಿ ನಡೆಸಿ, ಅರಣ್ಯ ಅಧಿಕಾರಿಗಳು ಸಿಬ್ಬಂದಿ ಜೊತೆ ಸಂವಾದ ಮಾಡಿ, ಬಳಿಕ ಸನಿಹದಲ್ಲೇ ಇರುವ ತಮಿಳುನಾಡಿನ ಮದುಮಲೈ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಕಾವಾಡಿ ದಂಪತಿ ಬೊಮ್ಮ ಮತ್ತು ಬೆಳ್ಳಿಯನ್ನು ಭೇಟಿ ಮಾಡಿ ಬಳಿಕ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಹಿಂದಿರುಗಿ, ಮುಕ್ತ ವಿವಿ ಸಭಾಂಗಣದಲ್ಲಿ ಏರ್ಪಡಿಸಿರುವ ಹುಲಿ ಯೋಜನೆ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು, 2022 ರಲ್ಲಿ ನಡೆದ ರಾಷ್ಟ್ರೀಯ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ.