ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಗುರುವಾರ(ನವೆಂಬರ್ 12, 2000) ಜವಾಹರಲಾಲ್ ನೆಹರು ಯೂನಿರ್ವಸಿಟಿಯಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಧಾನಿ ಮೋದಿ ಅವರು ಜವಾಹರಲಾಲ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಇಂದು ಸಂಜೆ 6.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ವಾಮಿ ವಿವೇಕಾನಂದರ ಲೈಫ್ ಸೈಜ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಪ್ರತಿಮೆ ಅನಾವರಣದ ನಂತರ ಸ್ವಾಮಿ ವಿವೇಕಾನಂದರಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನೆರವೇರಲಿದೆ ಎಂದು ಜೆಎನ್ ಯುನ ಉಪಕುಲಪತಿ ಜಗದೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದ ಅವರು ದೇಶ ಕಂಡ ಅಪ್ರತಿಮ ಕುಶಾಗ್ರಮತಿ ಹಾಗೂ ಧಾರ್ಮಿಕ ಮುಖಂಡರಾಗಿದ್ದರು. ಅವರು ಜೀವಿತಾವಧಿಯಲ್ಲಿ ಸ್ವಾತಂತ್ರ್ಯ, ಅಭಿವೃದ್ಧಿ, ಸಹಬಾಳ್ವೆ ಹಾಗೂ ಶಾಂತಿ ಸ್ಥಾಪನೆ ಕುರಿತು ಯುವಕರಿಗೆ ಸಂದೇಶವನ್ನು ರವಾನಿಸಿದ್ದರು.
ಜವಾಹರಲಾಲ್ ವಿವಿಯ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಜೆಎನ್ ಯು ಹಳೇವಿದ್ಯಾರ್ಥಿಗಳ ಬೆಂಬಲದೊಂದಿಗೆ ಪ್ರತಿಷ್ಠಾಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.
ಜಾಗತಿಕವಾಗಿ ಭಾರತ ಸದೃಢವಾಗಿ ಬೆಳೆಯುವ ನಿಟ್ಟಿನಲ್ಲಿ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಧಾರ್ಮಿಕವಾಗಿ ಗಟ್ಟಿಗೊಳಿಸುವ ನೆಲೆಯಲ್ಲಿ ದೇಶದ ಯುವಕರನ್ನು ಸಬಲೀಕರಣಗೊಳಿಸಲು ಸಂದೇಶವನ್ನು ರವಾನಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.