Advertisement

ವಿಶ್ವಸಂಸ್ಥೆಯ ಗ್ಲ್ಯಾಸ್ಗೋ ಹವಾಮಾನ ಶೃಂಗಸಭೆಗೆ ಪ್ರಧಾನಿ ಮೋದಿ

06:35 PM Oct 21, 2021 | Team Udayavani |

ಹೊಸದಿಲ್ಲಿ: ಗ್ಲಾಸ್ಗೊದಲ್ಲಿ ನಡೆಯಲಿರುವ ಯುಎನ್ ಹವಾಮಾನ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ  ಭೂಪೇಂದರ್ ಯಾದವ್ ಗುರುವಾರ ತಿಳಿಸಿದ್ದಾರೆ.

Advertisement

ಜಾಗತಿಕ ತಾಪಮಾನದ ವಿರುದ್ಧದ ಹೋರಾಟದಲ್ಲಿ ಮಾಲಿನ್ಯ ಹೊರಸೂಸುವಿಕೆಯನ್ನು ವಿರೋಧಿಸುವ ಪ್ರಯತ್ನಗಳಿಗೆ ಉತ್ತೇಜನ ನೀಡಲಾಗುವುದು ಎಂದು  ಭೂಪೇಂದರ್ ಯಾದವ್ ತಿಳಿಸಿದರು.

ಭಾರತವು ಹಸಿರುಮನೆ ಅನಿಲಗಳನ್ನು ಹೊರಸೂಸುವ ಪ್ರಮಾಣದಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ದೇಶವಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಈ ಸಭೆಯಲ್ಲಿ ಭಾಗವಹಿಸುವ ಅನಿಶ್ಚಿತತೆಯ ನಡುವೆಯೇ, ಅಕ್ಟೋಬರ್ 31 ರಿಂದ ಆರಂಭವಾಗಲಿರುವ COP 26 ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನ ಮತ್ತು ಭಾರತ ಅತಿ ಹೆಚ್ಚು ಮಾಲಿನ್ಯ ಉತ್ಪದಿಸುವ ದೇಶಗಳಾಗಿದ್ದರೂ ಕೂಡ ಇಷ್ಟರ ವರೆಗೆ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೃಢ ಪ್ರತಿಜ್ಞೆ ಕೈಗೊಂಡಿಲ್ಲ. ಹಾಗಾಗಿ ಈ ಶೃಂಗಸಭೆಯಲ್ಲಿ ಭಾರತ ಮತ್ತು ಚೀನಕ್ಕೆ ಇತರ ದೇಶಗಳಿಂದ ಒತ್ತಡ ಹೆಚ್ಚಾಗುವ ಸಾಧ್ಯತೆಗಳಿವೆ.

ಭಾರತವು ಈ ಶೃಂಗಸಭೆಯಲ್ಲಿ ಭಾಗವಹಿಸಲಿದೆ. ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಭಾರತ ಈಗಲೂ ನಡೆಸುತ್ತಿದೆ ಮತ್ತು ಮುಂದೆಯು ಹೆಚ್ಚಿನ ಕ್ರಮಗಳನ್ನು ಈ ಕುರಿತು ಕೈಗೊಳ್ಳಲಾಗುವುದು ಎಂದು ಕೇಂದ್ರ ಪರಿಸರ ಖಾತೆ ಸಚಿವರಾದ ಭೂಪೇಂದ್ರ ಯಾದವ್‌ ಸಂದರ್ಶನವೊಂದರಲ್ಲಿ ತಿಳಿಸಿದರು.

Advertisement

2030 ರ ವೇಳೆಗೆ ದೇಶವು ಹಸಿರು ಇಂಧನದ ಸಾಮರ್ಥ್ಯವನ್ನು 450 GW ಗೆ ಹೆಚ್ಚಿಸುವ ಹಾದಿಯಲ್ಲಿದೆ ಎಂದು ಅವರು ಹೇಳಿದರು.ಈಗಾಗಲೇ 100 GW ಗಿಂತ ಹೆಚ್ಚು ನವೀಕರಿಸಬಹುದಾದ ಇಂಧನ ಶಕ್ತಿಯ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದೆ. ಇದು ಒಟ್ಟಾರೆ ಪರಿಸರ ಸ್ನೇಹಿ ಇಂದನ ಉತ್ಪಾದನೆಯ 25% ಕ್ಕಿಂತ ಹೆಚ್ಚು ಎಂದು ತಿಳಿಸಿದರು.

ಇದನ್ನೂ ಓದಿ:– ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆ

ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ತಡೆಯುವ ಬಗೆಗಿನ ಕ್ರಮಕ್ಕಾಗಿ ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡವು ಜಾಗತಿಕವಾಗಿ ಅನೇಕ ದೇಶಗಳು ಮತ್ತು ಕಂಪನಿಗಳು ಈ ಪ್ರಯತ್ನಕ್ಕೆ ಕೊಡುಗೆ ನೀಡುವ ಭರವಸೆಯನ್ನು ನೀಡಿವೆ, ಈ ಕುರಿತಂತೆ ಗ್ಲಾಸ್ಗೊದಲ್ಲಿ ಚರ್ಚೆ ನಡೆಸಲಾಗುವುದು ಮತ್ತು ಈಗಿರುವ ಪರಿಸರ ಮಾಲಿನ್ಯ ತಡೆ ಖಾಯ್ದೆಗಳ ತಿದ್ದುಪಡಿ ಮಾಡಲಾಗುವುದು ಎಂದು ತಿಳಿಸಿದರು.

ಭಾರತವು ಸಂಪೂರ್ಣವಾಗಿ ಕಾರ್ಬನ್‌ ಡಯಾಕ್ಸೈಡ್‌  ಉತ್ಪಾದನೆಯನ್ನು ತಗ್ಗಿಸಲಾಗದಿದ್ದರೂ 2050ರ ವೇಳೆಗೆ ದೇಶಿಯ ತಾಪಮಾನವನ್ನು 1.5 ಸೆಲ್ಸಿಯಸ್‌ಗೆ ತಗ್ಗಿಸುವ ಗುರಿ ಹೊಂದಿದೆ ಎಂದರು.

ಮೋದಿ ಅವರ ಅಧ್ಯಕ್ಷತೆಯಲ್ಲಿರುವ ಕ್ಯಾಬಿನೆಟ್, COP26 ನಲ್ಲಿ ಭಾರತವು ಯಾವ ಸ್ಥಾನವನ್ನು ತೆಗೆದುಕೊಳ್ಳಬೇಕು ಎಂದು ಬಹುಶಃ ಒಂದು ವಾರದೊಳಗೆ ನಿರ್ಧರಿಸುತ್ತದೆ ಎಂದು ಪರಿಸರ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಕಳೆದ ತಿಂಗಳು, ಭಾರತದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಅವರು ಹೇಳಿದಂತೆ, ಶ್ರೀಮಂತ ರಾಷ್ಟ್ರಗಳು ಬಡ ದೇಶಗಳಿಗೆ ಹವಾಮಾನ ಬದಲಾವಣೆಯ ವಿರುದ್ಧ ಹೋರಾಟದಲ್ಲಿ ಸಹಾಯ ಮಾಡಲು 100 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚಿನ ಮೊತ್ತವನ್ನು ನೀಡಬೇಕಾಗುತ್ತದೆ ಎಂದಿದ್ದರು.

“ಇಂದಿಗೂ, ಭಾರತದ ತಲಾ ಹಸಿರುಮನೆ ಹೊರಸೂಸುವಿಕೆಯು ವಿಶ್ವದ ಸರಾಸರಿಯ ಮೂರನೇ ಒಂದು ಭಾಗದಷ್ಟಿದೆ” ಎಂದು ಯಾದವ್ ಹೇಳಿದರು.

ಸುಮಾರು 120 ದೇಶಗಳು ಪರಿಷ್ಕೃತ ಎನ್‌ಡಿಸಿ(Nationally Determined Contributions)ಗಳನ್ನು ಸಲ್ಲಿಸಿವೆ, ಆದರೆ ಈ ದೇಶಗಳು ಪ್ರತಿಜ್ಞೆಗಳಿಗೆ ಸಮಯದ ಮಿತಿ ವಿಧಿಸಿಕೊಂಡಿಲ್ಲ ಮತ್ತು ಬದ್ಧತೆಯನ್ನು ತೋರಿಸುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next