Advertisement

ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಉಚಿತ ಕೋವಿಡ್ ಲಸಿಕೆ…ಪ್ರಧಾನಿ ಮೋದಿ

06:11 PM Jun 07, 2021 | Team Udayavani |

ನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ(ಜೂನ್ 07) ಸಂಜೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.

Advertisement

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ 19 ಸೋಂಕು ತಡೆಗಟ್ಟಲು ಹಂತ, ಹಂತವಾಗಿ ಲಾಕ್ ಡೌನ್ ಸೇರಿದಂತೆ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಿದ್ದವು.

ದೇಶದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪುವವರ ಪ್ರಮಾಣ ಕೂಡಾ ಕಡಿಮೆಯಾಗಿದ್ದು, ಸಕ್ರಿಯ ಕೋವಿಡ್ 19 ಪ್ರಕರಣಗಳ ಸಂಖ್ಯೆ ಕೂಡಾ 14ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.

ಪ್ರಧಾನಿ ಭಾಷಣದ ಹೈಲೈಟ್ಸ್:

“ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ಲಸಿಕೆ ಖರೀದಿಸಬಹುದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 150 ರೂಪಾಯಿ ಸೇವಾ ಶುಲ್ಕ ವಿಧಿಸಬಹುದಾಗಿದೆ. ಶೇ.75ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರ ಖರೀದಿಸಲಿದೆ.  ಜೂನ್ 21ರಿಂದ ದೇಶದ ಜನರಿಗೆ ಉಚಿತ ಲಸಿಕೆ ನೀಡಿಕೆ. ನವೆಂಬರ್(ದೀಪಾವಳಿ) ವರೆಗೆ ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ನೀಡಲಾಗುವುದು”

Advertisement

*ದೇಶದಲ್ಲಿ ಕೋವಿಡ್ ಎರಡನೇ ಅಲೆ ಹರಡಲು ಆರಂಭವಾದ ಸಂದರ್ಭದಲ್ಲಿ ಆಕ್ಸಿಜನ್ ಗೆ ವಿಪರೀತ ಬೇಡಿಕೆ ಬಂದಿತ್ತು. ಆದರೂ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಪರಿಸ್ಥಿತಿಯನ್ನು ಎದುರಿಸಿದ್ದೇವೆ.

*ಜಗತ್ತನ್ನು ಕಂಗೆಡಿಸಿರುವ ಅದೃಶ್ಯ ಅಥವಾ ರೂಪಾಂತರಿ ಸೋಂಕಿನ ವಿರುದ್ಧ ಹೋರಾಡಲು ನಮಗೆ ಇರುವ ಅತೀ ದೊಡ್ಡ ಅಸ್ತ್ರ ಯಾವುದೆಂದರೆ ಅದು ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸುವುದು.

*ದೇಶದಲ್ಲಿ ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟ ಇನ್ನೂ ಮುಂದುವರಿದಿದೆ. ಈ ಹಿಂದೆ ಸಿಡುಬು, ಪೋಲಿಯೋ, ದಡಾರದಂತಹ ಸೋಂಕಿಗೆ ವಿದೇಶಗಳಲ್ಲಿ ಚುಚ್ಚುಮದ್ದು ಕಂಡು ಹಿಡಿದ ಮೇಲೆ ನಮ್ಮಲ್ಲಿ ಚುಚ್ಚು ಮದ್ದು ತಯಾರಾಗುತ್ತಲೇ ಇರಲಿಲ್ಲ. ಆದರೆ ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿಯೂ ಭಾರತ ಕಡಿಮೆ ಅವಧಿಯಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

*ಜಗತ್ತಿನಲ್ಲಿ ಅತೀ ಹೆಚ್ಚು ಲಸಿಕೆ ಭಾರತದಲ್ಲಿ ನೀಡಲಾಗುತ್ತಿದೆ. 130 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡುವುದು ಸವಾಲಿನ ಕೆಲಸವಾಗಿದೆ. ಆಧುನಿಕ ಜಗತ್ತು ಹಿಂದೆಂದೂ ಇಂತಹ ಸಂಕಷ್ಟ ಎದುರಿಸಿರಲಿಲ್ಲ.

*ಕೋವಿಡ್ ಈ ಶತಮಾನದ ಅತೀ ದೊಡ್ಡ ಮಹಾಮಾರಿಯಾಗಿದೆ. ಇಂತಹ ವೈರಸ್ ಹಿಂದೆಂದೂ ಕಂಡಿರಲಿಲ್ಲ. ಒಂದೇ ವರ್ಷದಲ್ಲಿ ಎರಡು ಲಸಿಕೆಗಳನ್ನು ಕಂಡು ಹಿಡಿದಿದ್ದೇವೆ. ದೇಶದಲ್ಲಿ 23 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ್ದೇವೆ. ಇದೀಗ ಕೋವಿಡ್ ಲಸಿಕೆಯೇ ನಮ್ಮ ಸುರಕ್ಷ ಕವಚವಾಗಿದೆ.

*ದೇಶದ ಬಡವರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಸರ್ಕಾರ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಬದ್ಧವಾಗಿದೆ. ಏತನ್ಮಧ್ಯೆ ನಾವು ಕಡಿಮೆ ಅವಧಿಯಲ್ಲಿ ಹೆಚ್ಚು ಲಸಿಕೆ ಉತ್ಪಾದನೆ ಮಾಡಿದ್ದೇವೆ. 

*ಶ್ರೀಮಂತ ದೇಶಗಳಲ್ಲಿ ಈಗ ಲಸಿಕೆ ನೀಡಲು ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಮುಂದುವರಿದ ದೇಶಗಳಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದೇವೆ ಎಂಬುದನ್ನು ಕೋವಿಡ್ ಸಂದರ್ಭದಲ್ಲಿ ಸಾಧಿಸಿದ್ದೇವೆ.

*ಭಾರತದಲ್ಲಿ ಲಸಿಕೆ ಉತ್ಪಾದನೆ ಜತೆಗೆ ಈಗ ಲಸಿಕೆ ನೀಡಿಕೆ ಹೆಚ್ಚು ಚುರುಕುಗೊಂಡಿದೆ. ಲಸಿಕೆ ನೀಡಿಕೆ ನಂತರ ಜನರು ಕೂಡಾ ಹೆಚ್ಚು ಧೈರ್ಯವಂತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಗಳ ಸಲಹೆಗಳನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ.

*ಇನ್ಮುಂದೆ ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಗಳಿಗೆ ಉಚಿತ ಲಸಿಕೆ ನೀಡಲಿದೆ. ರಾಜ್ಯ ಸರ್ಕಾರಗಳ ಲಸಿಕೆ ಬೇಡಿಕೆಗಳನ್ನು ಕೇಂದ್ರ ಈಡೇರಿಸಲಿದೆ. ಮುಂದಿನ ಎರಡು ವಾರಗಳ ನಂತರ ಲಸಿಕೆಯನ್ನು ನೀಡಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next