ನವದೆಹಲಿ: ಭಾರತೀಯ ವಾಯುಪಡೆ ಪಾಕಿಸ್ತಾನದ ಗಡಿಯೊಳಕ್ಕೆ ನುಗ್ಗಿ ಉಗ್ರರ ವಿರುದ್ಧ ಮಂಗಳವಾರ ಮುಂಜಾನೆ ನಡೆಸಿದ್ದ ಕಾರ್ಯಾಚರಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರವಾಗಿದ್ದು ಕ್ಷಣ, ಕ್ಷಣದ ಮಾಹಿತಿ ಪಡೆದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಬ್ಲಾಕ್ ನಲ್ಲಿರುವ ರಾಷ್ಟ್ರಪತಿ ಭವನದ ಕೋಣೆಯಲ್ಲಿ ಕುಳಿತು ವಾಯುಪಡೆ ಸಂಪೂರ್ಣ ಕಾರ್ಯಾಚರಣೆ ಬಗ್ಗೆ ಖುದ್ದು ಮಾಹಿತಿ ಪಡೆದಿರುವುದಾಗಿ ವರದಿ ವಿವರಿಸಿದೆ.
ಉನ್ನತ ಗುಪ್ತಚರ ಇಲಾಖೆ ಮೂಲಗಳ ಪ್ರಕಾರ, ವಾಯುಪಡೆ ಮುಖ್ಯಸ್ಥ ಬೀರೆಂದರ್ ಸಿಂಗ್ ಧಾನೋವ್ ಅವರು ಇಡೀ ದಾಳಿಯ ನೀಲನಕ್ಷೆ ರೂಪಿಸಿದ್ದರು. ಅಲ್ಲದೇ ವಾಯುಪಡೆಯ ಕಾರ್ಯಾಚರಣೆ ಹೇಗಿರುತ್ತದೆ ಎಂಬುದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಧಾನಿ ಮೋದಿಗೆ ವಿವರವಾಗಿ ಮಾಹಿತಿ ನೀಡಿದ್ದರು ಎಂದು ಹೇಳಿದೆ.
ಮಂಗಳವಾರ ಮುಂಜಾನೆ ನಡೆದ ಕಾರ್ಯಾಚರಣೆ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು ಮಾಹಿತಿ ಪಡೆದುಕೊಂಡಿದ್ದರು. ದಾಳಿಯ ತಂತ್ರ, ನಡೆಸಬೇಕಾದ ಕಾರ್ಯಾಚರಣೆ ಬಗ್ಗೆ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಅಡಗಿ ಕುಳಿತಿದ್ದ ಅಲ್ ಖೈದಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಒಸಾಬಾ ಬಿನ್ ಲಾಡೆನ್ ವಿರುದ್ಧ ಅಮೆರಿಕದ ಸೀಲ್ ಪಡೆ ಕಾರ್ಯಾಚರಣೆ ನಡೆಸಿದ್ದ ವೇಳೆಯೂ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಮಾಬಾ ಕೂಡಾ ಶ್ವೇತ ಭವನದಲ್ಲಿಯೇ ಕುಳಿತು ಇಡೀ ಕಾರ್ಯಾಚರಣೆಯ ಮಾಹಿತಿಯನ್ನು ಪಡೆದಿದ್ದರು ಮತ್ತು ವೀಕ್ಷಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.