ವಾರಾಣಸಿ: ರಷ್ಯಾ, ಉಕ್ರೇನ್ ಯುದ್ಧ ಬಿಕ್ಕಟ್ಟನ್ನು ರಾಜಕೀಯಗೊಳಿಸುತ್ತಿರುವ ವಿಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ವಂಶಾಡಳಿತ ಯಾವಾಗಲೂ ತಮ್ಮ ಸ್ವಾರ್ಥದ ಅವಕಾಶಗಳನ್ನು ಬಳಸಿಕೊಳ್ಳಲು ಹುಡುಕುತ್ತಿರುವುದಾಗಿ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಗರ್ಭಿಣಿಯಾಗಿರುವ ನಟಿ ಸಂಜನಾ ಗಲ್ರಾನಿಗೆ ಅಶ್ಲೀಲ ಸಂದೇಶ: ಆದಂ ಬಿದ್ದಪ್ಪ ಅರೆಸ್ಟ್
ಶನಿವಾರ (ಮಾರ್ಚ್ 05) ಉತ್ತರಪ್ರದೇಶದ ಕೊನೆಯ ಹಂತದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುರುಡು ವಿರೋಧ, ನಿರಂತರ ವಿರೋಧ, ತೀವ್ರ ಹತಾಸೆ ಮತ್ತು ಋಣಾತ್ಮಕತೆಯೇ ವಿಪಕ್ಷಗಳ ರಾಜಕೀಯದ ಸಿದ್ಧಾಂತವಾಗಿದೆ ಎಂದು ಪ್ರಧಾನಿ ಆರೋಪಿಸಿದರು.
ದೇಶ ಯಾವಾಗ ಸವಾಲುಗಳನ್ನು ಎದುರಿಸುತ್ತಿರುತ್ತದೋ, ಅಂತಹ ಸಂದರ್ಭವನ್ನು ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಲು ಕಾಯುತ್ತಿರುವುದಾಗಿ ದೂರಿದರು.
ಯುದ್ಧಗ್ರಸ್ತ ಉಕ್ರೇನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಕೇಂದ್ರ ಸರ್ಕಾರ ಆಪರೇಶನ್ ಗಂಗಾ ಹೆಸರಿನಲ್ಲಿ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ವಿದ್ಯಾರ್ಥಿಗಳ ಸ್ಥಳಾಂತರ ವಿಳಂಬವಾಗಲು ಕೇಂದ್ರ ಸರ್ಕಾರವೇ ಕಾರಣ ಎಂಬ ವಿಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಯಾವಾಗ ದೇಶದ ಕೆಲವೊಂದು ಸವಾಲನ್ನು ಎದುರಿಸುವ ಸನ್ನಿವೇಶದಲ್ಲಿರುತ್ತದೆಯೋ, ಈ ವಂಶಾಡಳಿತ ತಮ್ಮ ರಾಜಕೀಯ ಹಿತಾಸಕ್ತಿಯ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ದೇಶದ ಭದ್ರತಾ ಪಡೆ ಮತ್ತು ಜನರು ಬಿಕ್ಕಟ್ಟನ್ನು ಪರಿಹರಿಸಲು ಯತ್ನಿಸುತ್ತಿದ್ದರೆ, ವಿಪಕ್ಷಗಳು ಈ ಸನ್ನಿವೇಶವನ್ನು ಮತ್ತಷ್ಟು ಜಟಿಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.