Advertisement
ಗೋ ಭಕ್ತಿಯ ಹೆಸರಲ್ಲಿ ಹಿಂಸಾಚಾರಕ್ಕೆ ಇಳಿಯಬೇಡಿ ಎಂದು ದೇಶದ ಜನತೆಗೆ ಈ ಹಿಂದೆಯೂ ಮೋದಿ ಕರೆ ನೀಡಿದ್ದರು. ರವಿವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೆದುರೇ ತಮ್ಮ ಅಸಮಾಧಾನ, ಆಕ್ರೋಶವನ್ನು ಅವರು ಹೊರಹಾಕಿದ್ದಾರೆ. ಸೋಮವಾರದಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರವಿವಾರ ಹೊಸದಿಲ್ಲಿಯಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಈ ವೇಳೆ ಮಾತನಾಡಿದ ಪ್ರಧಾನಿ, ‘ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಆಯಾ ರಾಜ್ಯ ಸರಕಾರಗಳ ಹೊಣೆ. ಗೋರಕ್ಷಣೆ ಹೆಸರಲ್ಲಿ ಹಿಂಸಾಚಾರ ನಡೆದರೆ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕಾದ ಹೊಣೆಗಾರಿಕೆಯೂ ರಾಜ್ಯಗಳ ಮೇಲಿದೆ. ಗೋವನ್ನು ನಾವು ಮಾತೆಯೆಂದು ಪರಿಗಣಿಸುತ್ತೇವೆ. ಅದೊಂದು ಭಾವನಾತ್ಮಕ ವಿಚಾರ. ಆದರೆ, ನಮ್ಮ ದೇಶದಲ್ಲಿ ಗೋರಕ್ಷಣೆಗೆ ಸಂಬಂಧಿಸಿ ಅದರದ್ದೇ ಆದ ಕಾನೂನುಗಳಿವೆ, ಅವುಗಳನ್ನು ಉಲ್ಲಂಘಿಸುವುದು ಸರಿಯಲ್ಲ ಎಂಬುದನ್ನು ನಾವು ಅರಿತಿರಬೇಕು. ಹಾಗಾಗಿ, ಎಲ್ಲ ರಾಜಕೀಯ ಪಕ್ಷಗಳೂ ಸಮಾಜವಿದ್ರೋಹಿ ಶಕ್ತಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ, ಗೋರಕ್ಷಣೆಯ ಹೆಸರಲ್ಲಿ ಯಾರಾದರೂ ತಮ್ಮ ವೈಯಕ್ತಿಕ ದ್ವೇಷ ತೀರಿಸಿಕೊಳ್ಳುತ್ತಿದ್ದಾರಾ ಎಂಬುದನ್ನೂ ನೋಡಿಕೊಳ್ಳಬೇಕು’ ಎಂದಿದ್ದಾರೆ.
ಭ್ರಷ್ಟಾಚಾರ ಕುರಿತು ಪ್ರಸ್ತಾವಿಸುತ್ತಾ ಪ್ರಧಾನಿ ಮೋದಿ ಅವರು ತೃಣಮೂಲ ಕಾಂಗ್ರೆಸ್ ಮತ್ತು ಆರ್‌ಜೆಡಿಯನ್ನು ಚುಚ್ಚಿದ್ದೂ ಕಂಡುಬಂತು. ಭ್ರಷ್ಟಾಚಾರಿಗಳ ವಿರುದ್ಧ, ದೇಶವನ್ನು ಲೂಟಿ ಮಾಡುತ್ತಿರುವವರ ವಿರುದ್ಧ ಕಾನೂನು ತನ್ನದೇ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುತ್ತದೆ. ಆಗ ಇದೊಂದು ರಾಜಕೀಯ ಪಿತೂರಿ ಎನ್ನುತ್ತಾ ಎಸ್ಕೇಪ್ ಆಗಲು ಯತ್ನಿಸುವವರ ವಿರುದ್ಧ ನಾವೆಲ್ಲರೂ ಕೈಜೋಡಿಸಬೇಕು. ಆ ಮೂಲಕ ಭ್ರಷ್ಟಾಚಾರದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದರು ಮೋದಿ. ಇದೇ ವೇಳೆ, ರಾಷ್ಟ್ರಪತಿ ಚುನಾವಣೆ ಕುರಿತು ಮಾತನಾಡಿದ ಅವರು, ‘ಎಲ್ಲ ರಾಜಕೀಯ ಪಕ್ಷಗಳೂ ಎಲ್ಲೂ ಕೆಟ್ಟ ಪದಗಳನ್ನು ಬಳಸದೇ, ಘನತೆ ಕಾಪಾಡಿಕೊಂಡಿದ್ದಾರೆ. ಇದು ಸಂತೋಷದ ವಿಚಾರ’ ಎಂದರು. ಆಗಸ್ಟ್ 9ರಂದು ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆ ಇದ್ದು, ಎಲ್ಲ ರಾಜಕೀಯ ಪಕ್ಷಗಳೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದೂ ಅವರು ಮನವಿ ಮಾಡಿದರು. ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್, ಎನ್‌ಸಿಪಿ ನಾಯಕ ಶರದ್ ಪವಾರ್, ಸಿಪಿಎಂನ ಸೀತಾರಾಂ ಯೆಚೂರಿ, ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್, ಎನ್‌ಸಿ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಸಿಪಿಐನ ಡಿ.ರಾಜಾ ಪಾಲ್ಗೊಂಡಿದ್ದರು. ಜೆಡಿಯು ಮತ್ತು ಟಿಎಂಸಿ ನಾಯಕರು ಗೈರಾಗಿದ್ದರು.
Related Articles
ಗೋರಕ್ಷಣೆ ಹೆಸರಲ್ಲಿ ಹತ್ಯೆ, ರೈತರ ಪ್ರತಿಭಟನೆ, ಕಾಶ್ಮೀರ ವಿವಾದ, ವಿಪಕ್ಷಗಳ ಕೆಲವು ನಾಯಕರ ವಿರುದ್ಧ ಕ್ರಮ, ಚೀನ ವಿವಾದ… ಸೋಮವಾರ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಸರಕಾರವನ್ನು ಹಣಿಯಲು ವಿಪಕ್ಷಗಳು ರೂಪಿಸಿರುವ ಕಾರ್ಯತಂತ್ರಗಳ ಪಟ್ಟಿಯಿದು. ಕೆಲವು ಹಾಲಿ ಸದಸ್ಯರ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸೋಮವಾರದ ಕಲಾಪವನ್ನು ಮುಂದೂಡಲಾಗುತ್ತದೆ. ಮಂಗಳವಾರದಿಂದ ಉಭಯ ಸದನಗಳಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಲಿದೆ.
Advertisement
ವಿವಿಧ ವಿಚಾರಗಳನ್ನು ಎತ್ತಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾದರೆ, ಅತ್ತ ಆಡಳಿತಾರೂಢ ಎನ್‌ಡಿಎ ಕೂಡ ಪ್ರತಿತಂತ್ರ ಹೂಡಿದೆ. ಲೋಕಸಭೆ ಚುನಾವಣೆಗೂ ಮೊದಲು ಮೋದಿ ಅವರು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ಆಶ್ವಾಸನೆ ನೀಡಿದ್ದು, ಅದನ್ನು ಈಡೇರಿಸುವಂತೆ ಸಿಪಿಎಂ ಒತ್ತಾಯಿಸಲಿದೆ ಎಂದು ಯೆಚೂರಿ ಹೇಳಿದ್ದಾರೆ. ಇನ್ನು ಕಾಂಗ್ರೆಸ್, ಚೀನ ಮತ್ತು ಕಾಶ್ಮೀರದ ವಿಚಾರ ಪ್ರಸ್ತಾವಿಸಿ ಸರಕಾರದ ನೀತಿಯನ್ನು ಪ್ರಶ್ನಿಸಲು ಮುಂದಾಗಿದೆ. ಒಟ್ಟಿನಲ್ಲಿ ಮುಂಗಾರು ಅಧಿವೇಶನವೂ ಹಲವು ಚರ್ಚೆ, ತಿಕ್ಕಾಟಕ್ಕೆ ಸಾಕ್ಷಿಯಾಗುವ ಸುಳಿವು ಸಿಕ್ಕಿದೆ. ಆ.11ರವರೆಗೆ ಅಧಿವೇಶನ ನಡೆಯಲಿದೆ.