ಹೊಸದಿಲ್ಲಿ : ಗ್ಯಾಲಪ್ ಇಂಟರ್‌ನ್ಯಾಶನಲ್ ನಡೆಸಿರುವ “ಒಪೀನಿಯನ್ ಆಫ್ ವರ್ಲ್ಡ್ ಲೀಡರ್’ ಎಂಬ ವಾರ್ಷಿಕ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಮೂರನೇ ಅತ್ಯಂತ ಜನಪ್ರಿಯ ನಾಯಕನೆನಿಸಿದ್ದಾರೆ.
ಈ ಸಮೀಕ್ಷೆಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದವರೆಂದರೆ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಮತ್ತು ಫ್ರಾನ್ಸಿನ ಹೊಸ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್.
ವಿಶ್ವದ ಮೂರನೇ ಅತ್ಯಂತ ಜನಪ್ರಿಯ ನಾಯಕನೆಂದು ಪರಿಗಣಿತರಾಗುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘಟಾನುಘಟಿ ನಾಯಕರಾದ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಿದ್ದಾರೆ.
ತೃತೀಯ ಸ್ಥಾನಿ ಪ್ರಧಾನಿ ಮೋದಿ ಅವರ ಅನಂತರದಲ್ಲಿ ಈ ಪಟ್ಟಿಯಲ್ಲಿರುವವರೆಂದರೆ ಬ್ರಿಟನ್ ಪ್ರಧಾನಿ ತೆರೆಸಾ ಮೇ (4ನೇ ಸ್ಥಾನ), ಜಿನ್ ಪಿಂಗ್ (5ನೇ ಸ್ಥಾನ), ರಶ್ಯ ಅಧ್ಯಕ್ಷ ಪುಟಿನ್ (6ನೇ ಸ್ಥಾನ), ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸಾಉ (7ನೇ ಸ್ಥಾನ).
ಪ್ರಧಾನಿ ಮೋದಿ ಅವರು ವಿಶ್ವದ 3ನೇ ಅತ್ಯಂತ ಜನಪ್ರಿಯನಾಗಿ ಮೂಡಿ ಬಂದಿರುವುದು 2018ರಲ್ಲಿನ ಎಂಟು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು 2019ರಲ್ಲಿನ ಲೋಕಸಭಾ ಚುನಾವಣೆಗೆ ಅವರ ಪಕ್ಷವಾದ ಬಿಜೆಪಿ ಭಾರೀ ಲಾಭವಾಗಲಿದೆ ಎಂದು ಊಹಿಸಲಾಗಿದೆ.