ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರ ನೂರನೇ ವರ್ಷದ ಪುಣ್ಯಸ್ಮರಣೆ ಶನಿವಾರ (ಆಗಸ್ಟ್ 01-2020) ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಿಲಕರ ಕೊಡುಗೆಯನ್ನು ನೆನಪಿಸಿಕೊಂಡಿದ್ದಾರೆ.
ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು,,ಅದನ್ನು ನಾನು ಪಡೆದೇ ಪಡೆಯುತ್ತೇನೆ ಎಂಬುದು ತಿಲಕರ ಪ್ರಭಾವಶಾಲಿ ಘೋಷಣೆಯಾಗಿತ್ತು. ಇದರಿಂದಾಗಿ ಇಡೀ ದೇಶವೇ ಒಗ್ಗಟ್ಟಾಗುವಂತೆ ಮಾಡಿ ವಸಾಹತುಶಾಹಿ ವಿರುದ್ಧ ಹೋರಾಡಲು ಪ್ರೇರೇಪಣೆ ನೀಡಿತ್ತು ಎಂದು ವರದಿ ತಿಳಿಸಿದೆ.
ಆಗಸ್ಟ್ 1ರಂದು (2020) ಲೋಕಮಾನ್ಯ ತಿಲಕರ 100ನೇ ವರ್ಷದ ಪುಣ್ಯಸ್ಮರಣೆ ಕುರಿತು ಪ್ರಧಾನಿ ಟ್ವೀಟ್ ಮೂಲಕ ಸ್ವಾತಂತ್ರ್ಯಕ್ಕೆ ನೀಡಿರುವ ಅಪ್ರತಿಮ ಕೊಡುಗೆ ಬಗ್ಗೆ ನೆನಪಿಸಿಕೊಂಡಿದ್ದಾರೆ.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಲಾಲ್, ಬಾಲ್, ಪಾಲ್(ಲಾಲ ಲಜಪತ್ ರಾಯ್, ಬಾಲ ಗಂಗಾಧರ್ ತಿಲಕ್ ಮತ್ತು ಬಿಪಿನ್ ಚಂದ್ರಪಾಲ್) ಪ್ರಮುಖ ಪಾತ್ರವಹಿಸಿದ್ದರು. ಇದರಲ್ಲಿ ತಿಲಕ್ ಅವರನ್ನು ರಾಷ್ಟ್ರೀಯವಾದದ ಪಿತಾಮಹ ಎಂದು ಕರೆಯಿಸಿಕೊಂಡಿದ್ದರು. ಅಲ್ಲದೇ ಲೋಕಮಾನ್ಯ ಎಂಬ ಬಿರುದಾಂಕಿರಾಗಿದ್ದರು. ಅಂದರೆ ಜನ ಮೆಚ್ಚಿದ ನಾಯಕ ಎಂಬುದಾಗಿ. ಮಹಾತ್ಮ ಗಾಂಧಿ ಅವರು ತಿಲಕ್ ಅವರನ್ನು ಆಧುನಿಕ ಭಾರತದ ನಿರ್ಮಾತೃ ಎಂದು ಕರೆದಿದ್ದರು.
ಲೋಕಮಾನ್ಯ ತಿಲಕ್ ರ ನೂರನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಲೋಕಮಾನ್ಯರ ಧೈರ್ಯ, ಚಾತುರ್ಯ ಹಾಗೂ ಸ್ವರಾಜ್ಯದ ಕಲ್ಪನೆ ಜನರನ್ನು ಪ್ರಭಾವಿತರನ್ನಾಗಿಸಿದೆ ಎಂದು ತಿಳಿಸಿದ್ದಾರೆ.