Advertisement

ಓಬವ್ವಗೆ ಇಲ್ಲದ ಸಮ್ಮಾನ ಸುಲ್ತಾನರಿಗೇಕೆ ನೀಡಿದ್ದು?

06:00 AM May 07, 2018 | Team Udayavani |

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ವಾಕ್‌ ಸಮರ ಮುಂದುವರಿದಿದೆ. ಕಾಂಗ್ರೆಸ್‌ ಅಧಿಕಾರಕ್ಕಾಗಿ ಧರ್ಮ, ಜಾತಿ ವಿಭಜಿಸಿ ಇತಿಹಾಸ ತಿರುಚುತ್ತಿದೆ ಎಂದು ಗಂಭೀರ ಆರೋಪವೆಸಗಿದ್ದಾರೆ.

Advertisement

ಕೋಟೆ ನಾಡು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ, “”ವೀರ ಮದಕರಿ ನಾಯಕರು ಸುಲ್ತಾನರ ದಾಳಿ ತಡೆಗಟ್ಟಿ ಕೋಟೆ ರಕ್ಷಿಸಿದರು. ಆದರೆ ಸುಲ್ತಾನರು ಮದಕರಿ ನಾಯಕರಿಗೆ ವಿಷ ಹಾಕಿ ಕೊಂದರು. ಓಬವ್ವಳನ್ನು ಮೋಸದಿಂದ ಹತ್ಯೆ ಮಾಡಿದರು. ಇಂಥ ಮದಕರಿ ನಾಯಕ ಮತ್ತು ಓಬವ್ವ ಅವರನ್ನು ಮರೆತಿರುವ ಕಾಂಗ್ರೆಸ್‌ ಸರ್ಕಾರ, ಸುಲ್ತಾನರ ಜಯಂತಿ ಆಚರಿಸುವ ಮೂಲಕ ಜನತೆಗೆ ದ್ರೋಹವೆಸಗಿದೆ” ಎಂದು ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿ ಸಿದ್ದರಾಮಯ್ಯ ಅವರ ನಡೆಯ ಬಗ್ಗೆ ಕಿಡಿ ಕಾರಿದರು. ಇದಕ್ಕೂ ಮೊದಲು ಚಿತ್ರದುರ್ಗದ ಇತಿಹಾಸ, ಮದಕರಿ ನಾಯಕ ಹಾಗೂ ವೀರ ವನಿತೆ ಒನಕೆ ಓಬವ್ವಳ ಸಾಧನೆ ಸ್ಮರಿಸಿದರು.

“”ಮತ ಗಳಿಕೆಯ ಏಕೈಕ ಉದ್ದೇಶದಿಂದ ಧರ್ಮ, ಜಾತಿಗಳನ್ನು ವಿಭಜಿಸಿ ಇತಿಹಾಸವನ್ನೇ ತಿರುಚುತ್ತಿದೆ. ಯಾರ ಜಯಂತಿ ಮಾಡಬೇಕೋ ಅದನ್ನು ಮಾಡುತ್ತಿಲ್ಲ, ವಿಷವಿಕ್ಕಿದವರ ಮತ್ತು ವಿಶ್ವಾತಘಾತುಕ ಕೃತ್ಯವೆಸಗಿದವರ ಜಯಂತಿ ಮಾಡುವ ಕಾಂಗ್ರೆಸ್‌ ಸರ್ಕಾರ, ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಅನ್ಯಾಯ ಮಾಡಲು ಹೊರಟಿದೆ. ಮಾತ್ರವಲ್ಲ, ಜನರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಡೀಲ್‌, ಬಿಜೆಪಿ ದಿಲ್‌ ಪಕ್ಷ:
“”ಕಾಂಗ್ರೆಸ್‌ ಯಾವಾಗಲೂ ಡೀಲ್‌ ಪಕ್ಷ. ಆದರೆ, ಬಿಜೆಪಿ ದಿಲ್‌ (ಹೃದಯವಂತಿಕೆ) ಇರುವ ಪಕ್ಷ’ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

“”ಕಾಂಗ್ರೆಸ್‌ ಪಕ್ಷದ ಹಲವು ನಾಯಕರ ಹೆಸರಿನ ಹಿಂದೆ, ಮುಂದೆ ಹಲವು ಉಪನಾಮಗಳಿವೆ. ಚಿತ್ರದುರ್ಗದಲ್ಲಿ ನಾನು ಕೇಳಿದ ಉಪನಾಮ “ಡೀಲ್‌ ಮಂತ್ರಿ’. ಡೀಲ್‌ ಆಗಲಿಲ್ಲ ಎಂದರೆ ಯಾವುದೇ ಬಿಲ್‌ ಪಾಸ್‌ ಆಗುವುದೇ ಇಲ್ಲ” ಎಂದು ಪರೋಕ್ಷವಾಗಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರನ್ನು ಟೀಕಿಸಿದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಟ್‌ಕೇಸ್‌ನಲ್ಲಿ ಸದಾ ಕ್ಲೀನ್‌ಚಿಟ್‌ ಪ್ರಮಾಣಪತ್ರ ಇಟ್ಟುಕೊಂಡೇ ಓಡಾಡುತ್ತಾರೆ. ಯಾವುದೇ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದರೂ, ಕೂಡಲೇ ಕ್ಲೀನ್‌ಚಿಟ್‌ ಪ್ರಮಾಣಪತ್ರಕ್ಕೆ ಸಹಿ ಮಾಡಿ ಕ್ಲೀನ್‌ಚಿಟ್‌ ಪದವಿ ಕೊಟ್ಟುಬಿಡುತ್ತಾರೆ ಎಂದು ಕುಟುಕಿದರು.

ಅಂಬೇಡ್ಕರ್‌, ನಿಜಲಿಂಗಪ್ಪಗೂ ಅವಮಾನ
ದೇಶಕ್ಕೆ ಸಂವಿಧಾನ ನೀಡಿದ ಡಾ| ಬಿ.ಆರ್‌.ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ಪಕ್ಷ ಅವಮಾನಿಸಿದೆ. “ಭಾರತ ರತ್ನ’ ಪ್ರಶಸ್ತಿಯನ್ನು ಒಂದು ಕುಟುಂಬದ ಎಲ್ಲರಿಗೂ ನೀಡಲಾಯಿತು. ಆದರೆ ಡಾ| ಅಂಬೇಡ್ಕರ್‌ ಅವರಿಗೆ “ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲು ವಾಜಪೇಯಿ ಅವರ ಸರ್ಕಾರವೇ ಬರಬೇಕಾಯಿತು. ಅಂಬೇಡ್ಕರ್‌ ಅವರ 125ನೇ ಜನ್ಮದಿನವನ್ನು ದೇಶ-ವಿದೇಶಗಳಲ್ಲಿ ನಮ್ಮ ಸರ್ಕಾರ ವಿಶೇಷವಾಗಿ ಆಚರಿಸಿತು. ದಲಿತರನ್ನು ವೋಟ್‌ ಬ್ಯಾಂಕ್‌ ಮಾಡಿಕೊಂಡಿರುವ ಕಾಂಗ್ರೆಸ್‌, ದಲಿತರನ್ನು ಗೌರವಿಸುತ್ತಿಲ್ಲ ಎಂದು ಪ್ರಧಾನಿ ತರಾಟೆಗೆ ತೆಗೆದುಕೊಂಡರು.

ಚಿತ್ರದುರ್ಗದ ಕಲಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್‌ ಪಕ್ಷ ಹೇಗೆ ನಡೆಸಿಕೊಂಡಿತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ದೆಹಲಿಯಲ್ಲಿ ಕುಳಿತ ನಾಯಕರು ನಿಜಲಿಂಗಪ್ಪ ಅವರು ಬೆಳೆಯದಂತೆ ನೋಡಿಕೊಂಡರು. ನಿಜಲಿಂಗಪ್ಪ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ವ್ಯವಸ್ಥಿತವಾಗಿ ತುಳಿಯಲಾಯಿತು. ನೆಹರೂ ಸರ್ಕಾರದ ಆರ್ಥಿಕ ನೀತಿಯನ್ನು ವಿರೋಧಿಸಿದ್ದೇ ನಿಜಲಿಂಗಪ್ಪ ಮಾಡಿದ ತಪ್ಪು. ನಿಜಲಿಂಗಪ್ಪ ಮತ್ತು ಅಂಬೇಡ್ಕರ್‌ ಅವರು ದಲಿತರ, ಬಡವರ ಪರವಾಗಿ ಹಾಗೂ ಶೋಷಿತರ ಏಳಿಗೆಗಾಗಿ ಕೆಲಸ ಮಾಡುತ್ತಿದ್ದರು. ಆದರೆ ಕಾಂಗ್ರೆಸ್‌ ಪಕ್ಷ ಅವರಿಬ್ಬರನ್ನು ಅಗೌರವದಿಂದ ನಡೆಸಿಕೊಂಡಿತು ಎಂದು ಕುಟುಕಿದರು.

“ಸುಳ್ಳು ಹೇಳಿದ ಸಿಎಂ’ರನ್ನು ಓಡಿಸಿ: ಮೋದಿ
2013ರ ವಿಧಾನಸಭೆ ಚುನಾವಣೆ ವೇಳೆ ಬಾಗಲಕೋಟೆಯಲ್ಲಿ ಜವಳಿ ಪಾರ್ಕ್‌ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ, ಈಗ ಬಾಗಲಕೋಟೆಗೆ ಓಡಿ ಬಂದು ನಿಂತಿದ್ದಾರೆ. ಐದು ವರ್ಷಗಳ ಕಾಲಾವಧಿಯಲ್ಲಿ ಏಕೆ ನಿರ್ಮಿಸಿಲ್ಲ ಎಂದು ಕೇಳಿ. ಸುಳ್ಳು ಹೇಳಿದ ಸಿಎಂ ಈಗ ಬಾಗಲಕೋಟೆಯಲ್ಲಿ ಅದೃಷ್ಟ ಪರೀಕ್ಷೆಗೆ ಬಂದಿದ್ದು, ಅವರನ್ನು ಇಲ್ಲಿಂದ ಓಡಿಸಿ ಎಂದು ಪ್ರಧಾನಿ ಮೋದಿ ಜಮಖಂಡಿ ಪ್ರಚಾರ ಸಭೆಯಲ್ಲಿ ಪಲ್ಗೊಂಡು, ಹೀಗೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next