ಬೆಂಗಳೂರು: ಇತ್ತೀಚೆಗೆ ಉಡುಪಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹೊಗಳಿದ್ದ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಬೆಂಗಳೂರಿನ ಸಭೆಯಲ್ಲಿ ಜೆಡಿಎಸ್ ವಿರುದ್ಧ ವಾಗ್ಧಾಳಿ ನಡೆಸಿದರು.
ರಾಜ್ಯದಲ್ಲಿ ಎಂತಹುದೇ ಸಂದರ್ಭದಲ್ಲೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್‌ನ್ನು ನಿರ್ಮೂಲನೆ ಮಾಡಲು, ಕರ್ನಾಟಕದ ಭಾಗ್ಯವನ್ನು ಬದಲಿಸಲು ಜೆಡಿಎಸ್‌ನಿಂದ ಸಾಧ್ಯವಿಲ್ಲ. ಹೀಗಾಗಿ, ಜೆಡಿಎಸ್‌ಗೆ ಮತ ನೀಡಬೇಡಿ.ಬುದ್ಧಿವಂತರ್ಯಾರೂ ಆ ಪಕ್ಷಕ್ಕೆ ಮತ ನೀಡಿ ವ್ಯರ್ಥ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ಜೆಡಿಎಸ್ ಚುನಾವಣೆಯಲ್ಲಿ ಸೋತರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಜೆಡಿಎಸ್ ಅನ್ಯ ರಾಜ್ಯಗಳಲ್ಲಿನ ಮತೀಯವಾದಿ ಶಕ್ತಿಗಳು ಹಾಗೂ ಉಗ್ರವಾದವನ್ನು ಸಮರ್ಥಿಸುವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದ ಸುರಕ್ಷತೆಯೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದೆ ಎಂದು ಕುಟುಕಿದರು.
ರಾಜಕೀಯ ಪಂಡಿತರು ಹಾಗೂ ಸಮೀಕ್ಷೆಗಳ ಪ್ರಕಾರ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿಯಲಿದ್ದು ಅದೂ ಸಹ ಪ್ರಯಾಸದಿಂದ ಕುಂಟುತ್ತಾ, ಕುಂಟುತ್ತಾ ತಲುಪಲಿದೆ. ಹೀಗಾಗಿ ಜೆಡಿಎಸ್ ಪಾತ್ರ ಸೀಮಿತ ಎಂದು ಹೇಳಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್‌ನ್ನು ಗುರಿಯಾಗಿರಿಸಿಕೊಂಡು ಟೀಕೆ ಮಾಡುತ್ತಿರುವುದನ್ನು ಗಮನಿಸಿದರೆ ಒಂದು ಅಂಶವಂತೂ ಸ್ಪಷ್ಟವಾಗುತ್ತಿದೆ. ಎರಡೂ ಪಕ್ಷಗಳಿಗೆ ನಮ್ಮ ಬಗ್ಗೆ ಭಯ ಹುಟ್ಟಿದೆ. ನಾವು ಅಧಿಕಾರಕ್ಕೆ ಬರುವ ಭಯ ಅವರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ.
– ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ