ನ್ಯೂಯಾರ್ಕ್ : ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (ಜೂ. 21) ಬೃಹತ್ ಸಮಾರಂಭದಲ್ಲಿ ಭಾಗಿಯಾಗಿ ಹಲವು ರಾಷ್ಟ್ರಗಳ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಸಂದೇಶದ ಮೂಲಕ ಅಂತಾರಾಷ್ಟ್ರೀಯ ಯೋಗ ದಿನದಂದು ಜನರಿಗೆ ಶುಭಾಶಯ ಕೋರಿದ್ದಾರೆ. ಸಂಜೆ 5.30 ರ ಸುಮಾರಿಗೆ ಅಮೆರಿಕದ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತದ ಕರೆಗೆ 180 ಕ್ಕೂ ಹೆಚ್ಚು ದೇಶಗಳ ಒಗ್ಗೂಡುವಿಕೆ ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ ಎಂದು ಹೇಳಿದರು. ಅವರು ಋಷಿಗಳನ್ನು ಉಲ್ಲೇಖಿಸಿ, ನಮ್ಮನ್ನು ಒಂದುಗೂಡಿಸುವುದು ಯೋಗ ಎಂದು ಹೇಳಿದರು.
ನನಗೆ ನೆನಪಿದೆ, ಸುಮಾರು 9 ವರ್ಷಗಳ ಹಿಂದೆ, ಇಲ್ಲಿಯೇ ಯುಎನ್‌ನಲ್ಲಿ, ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಬಗ್ಗೆ ಪ್ರಸ್ತಾವನೆಯನ್ನು ನೀಡುವ ಗೌರವ ನನಗೆ ಸಿಕ್ಕಿತು.ಅಂದಿನ ಕಲ್ಪನೆಯನ್ನು ಬೆಂಬಲಿಸಲು ಇಡೀ ಜಗತ್ತೇ ಒಗ್ಗೂಡಿದ್ದನ್ನು ನೋಡುವುದು ಅದ್ಭುತವಾಗಿದೆ ಎಂದರು.
ನೀವೆಲ್ಲ ಬಂದಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಇಂದು ಇಲ್ಲಿ ಪ್ರತಿಯೊಂದು ರಾಷ್ಟ್ರೀಯತೆಯನ್ನು ಪ್ರತಿನಿಧಿಸಲಾಗಿದೆ ಮತ್ತು ನಮ್ಮೆಲ್ಲರನ್ನೂ ಇಲ್ಲಿಗೆ ತರಲು ಅದ್ಭುತವಾದ ಕಾರಣವೆಂದರೆ – ಯೋಗ.ಯೋಗ ಎಂದರೆ ಒಂದಾಗುವುದು! ಆದ್ದರಿಂದ, ನಿಮ್ಮ ಒಗ್ಗೂಡುವಿಕೆ ಯೋಗದ ಮತ್ತೊಂದು ರೂಪದ ಅಭಿವ್ಯಕ್ತಿಯಾಗಿದೆ ಎಂದರು.