ಹೊಸದಿಲ್ಲಿ : ದೇಶದಲ್ಲಿ 100 ಕೋಟಿ ಕೊರೊನಾ ಲಸಿಕೆ ಪೂರ್ಣಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಸಂಭ್ರಮವನ್ನು ಹಂಚಿಕೊಳ್ಳಲು ಪ್ರಧಾನಿ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು, ನರ್ಸ್ ಗಳು ಮತ್ತು ಕೊವಿಡ್ ಲಸಿಕೆ ನೀಡುವಲ್ಲಿ ಮುನ್ನೆಲೆಯಲ್ಲಿ ಸಹಕರಿಸಿದ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ”ಭಾರತದ ಇತಿಹಾಸ ಬರೆದಿದೆ . ನಾವು 130 ಕೋಟಿ ಭಾರತೀಯರ ವಿಜ್ಞಾನ, ಉದ್ಯಮ ಮತ್ತು ಸಾಮೂಹಿಕ ಮನೋಭಾವದ ವಿಜಯವನ್ನು ಕಾಣುತ್ತಿದ್ದೇವೆ. 100 ಕೋಟಿ ಲಸಿಕೆಗಳನ್ನು ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಮತ್ತು ಈ ಸಾಧನೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು.” ಎಂದು ಸಂತಸ ಹಂಚಿಕೊಂಡಿದ್ದಾರೆ.
ಕೇಂದ್ರ ಸರಕಾರ ಬುಧವಾರ ವ್ಯಾಕ್ಸಿನೇಷನ್ ಗೀತೆಯನ್ನು ಬಿಡುಗಡೆಗೊಳಿಸಿದ್ದು, ಪದ್ಮಶ್ರೀ ಕೈಲಾಷ್ ಖೇರ್ ಅವರು ಹಾಡಿದ್ದಾರೆ.
100 ಕೋಟಿ ಲಸಿಕೆ ಪೂರ್ಣಗೊಳಿಸಿದ ಕುರಿತು ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಮೆಟ್ರೋ ಸ್ಟೇಷನ್ ಗಳು ,ಹಡಗುಗಳಲ್ಲಿ ಘೋಷಿಸಲಾಗುವುದು ಎಂದು ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.
‘ಇದು ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಿಂದ ಸಾಧ್ಯವಾಗಿದೆ’ ಎಂದು ಮನ್ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ.
CoWIN ಪೋರ್ಟಲ್ ನಲ್ಲಿ ಗುರುವಾರ ಬೆಳಗ್ಗೆ 9:47 ಕ್ಕೆ 100 ಕೋಟಿ ಲಸಿಕೆ ನೀಡಲಾಗಿರುವುದು ದಾಖಲಾಗಿದೆ.
ಜನವರಿ 16, 2021ರಂದು ಲಸಿಕೆಗಳನ್ನು ನೀಡಲು ಆರಂಭಿಸಲಾಗಿತ್ತು. ಮೊದಲು ಆರೋಗ್ಯ ಕಾರ್ಯಕರತರಿಗೆ ಆದ್ಯತೆ ನೀಡಲಾಗಿತ್ತು. ಫೆಬ್ರವರಿ 2 ಬಳಿಕ ಭದ್ರತಾ ಪಡೆಗಳು ಮತ್ತು ಪೊಲೀಸರಿಗೆ ನೀಡಲಾಗಿತ್ತು. ಮಾರ್ಚ್ 1 ರ ಬಳಿಕ 60 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ, 45 ವರ್ಷ ಮೇಲ್ಪಟ್ಟವರಿಗೆ ಎಪ್ರಿಲ್ 1 ರಿಂದ , ಮೇ 1 ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಆರಂಭಿಸಲಾಗಿತ್ತು.