Advertisement

ಅಟಲ್‌ಗೆ ಗೌರವ; ಏಕಕಾಲ ಚುನಾವಣೆ ಚರ್ಚೆ ಆರೋಗ್ಯಕರ ಬೆಳವಣಿಗೆ

06:00 AM Aug 27, 2018 | Team Udayavani |

ನವದೆಹಲಿ: “ಲೋಕಸಭೆ, ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಚರ್ಚೆಗಳು ಆರಂಭವಾಗಿರುವುದು ಪ್ರಜಾಪ್ರಭುತ್ವದಲ್ಲಿ ಉತ್ತಮ ಬೆಳವಣಿಗೆ” ಎಂದು ಹೇಳಿ ರುವ ಪ್ರಧಾನಿ ನರೇಂದ್ರ ಮೋದಿ, ಇದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತಿರುವ ಗೌರವ ಎಂದು ವ್ಯಾಖ್ಯಾನಿಸಿದ್ದಾರೆ.

Advertisement

ಭಾನುವಾರ 47ನೇ ಆವೃತ್ತಿಯ “ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದ್ದಾರೆ. ಜತೆಗೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಪ್ರಧಾನಿ ಮೋದಿ, ವಾಜಪೇಯಿ ದೇಶದ ರಾಜಕೀಯ ವ್ಯವಸ್ಥೆಯನ್ನೇ ಬದಲಾಯಿಸಿದವರು ಎಂದು ಗುಣಗಾನ ಮಾಡಿದರು.

“”ಲೋಕಸಭೆ, ರಾಜ್ಯಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಸರ್ಕಾರ ಮತ್ತು ಪ್ರತಿಪಕ್ಷಗಳು ಮಾತನಾಡಲಾರಂಭಿಸಿವೆ. ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಆರೋಗ್ಯಕರ ಬೆಳವಣಿಗೆ. ಇಂಥ ವಿಚಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿವೆ. ಮುಕ್ತ ಮನಸ್ಸಿನಿಂದ ನಡೆಯುವ ಈ ಚರ್ಚೆಗಳು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ” ಎಂದು ಹೇಳಿದರು.

“”ಉತ್ತಮ ಆಡಳಿತವನ್ನು ಮುಖ್ಯ ವಾಹಿನಿಗೆ ತಂದ ಹೆಗ್ಗಳಿಕೆ ವಾಜಪೇಯಿ ಅವರಿಗೆ ಸಲ್ಲುತ್ತದೆ. 2003ರಲ್ಲಿ ಜಾರಿಗೆ ತಂದ 91ನೇ ಸಾಂವಿಧಾನಿಕ ತಿದ್ದುಪಡಿಯಿಂದ ರಾಜ್ಯಗಳಲ್ಲಿ ಸಚಿವ ಸಂಪುಟ ಗಾತ್ರ ತಗ್ಗಲು ಅನುಕೂಲವಾಯಿತು. ಹೀಗಾಗಿ ಬಹಳ ವರ್ಷಗಳಿಂದ ರಾಜ್ಯಗಳಲ್ಲಿ ರಚನೆಯಾಗುತ್ತಿದ್ದ ದೊಡ್ಡ ಗಾತ್ರದ ಸಂಪುಟಕ್ಕೆ ತೆರೆ ಬಿದ್ದಿತು. ಜತೆಗೆ 2001ರಲ್ಲಿ ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸುವ ಪದ್ಧತಿ ಜಾರಿಗೆ ತಂದವರೇ ಅಟಲ್‌ ಎಂದರು ಪ್ರಧಾನಿ ಮೋದಿ. 2002ರಲ್ಲಿ ಧ್ವಜ ಹಾರಿಸುವ ಸಂಹಿತೆಯಲ್ಲೂ ಬದಲಾವಣೆ ಮಾಡಿದವರೂ ಅವರೇ ಎಂದು ಕೊಂಡಾಡಿದರು.

ಸೇನೆಯ ಕ್ರಮಕ್ಕೆ ಮೆಚ್ಚುಗೆ:
ಕೇರಳ ಪ್ರವಾಹದ ಸಂದರ್ಭದಲ್ಲಿ ಭೂಸೇನೆ, ವಾಯುಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್, ಬಿಎಸ್‌ಎಫ್, ಸಿಐಎಸ್‌ಎಫ್ ಮತ್ತು ಆರ್‌ಎಎಫ್ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಮತ್ತು ಅವರು ನಡೆಸಿದ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “”ಶನಿವಾರ ಕೇರಳ ಸೇರಿದಂತೆ ದೇಶಾದ್ಯಂತ ಓಣಂ ಸಂಭ್ರಮ. ಈ ಸಂದರ್ಭದಲ್ಲಿ ವಿಶೇಷವಾಗಿ ಕೇರಳ ತನ್ನ ಹಿಂದಿನ ಸ್ಥಿತಿಗೆ ಬರಲಿ ಎಂದು ಪ್ರಾರ್ಥಿಸಬೇಕು. ಅಸುನೀಗಿದವರ ನಷ್ಟ ಭರಿಸಲು ಸಾಧ್ಯವಿಲ್ಲ. ಕೇರಳ ಹೊಂದಿದ ನಷ್ಟ-ಕಷ್ಟಕ್ಕೆ ದೇಶವೇ ಜತೆಯಾಗಿ ನಿಲ್ಲಲಿದೆ” ಎಂದರು ಮೋದಿ.

Advertisement

ಅತ್ಯಾಚಾರ ಸಹಿಸಲಾರೆವು:
ದೇಶದಲ್ಲಿನ ಅತ್ಯಾಚಾರ ಪ್ರಕರಣಗಳನ್ನು ಸಹಿಸುವುದಿಲ್ಲ. ಅದನ್ನು ತಡೆಯಲು ಸಂಸತ್‌ನಲ್ಲಿ ಹೊಸ ಕಾನೂನು ಅಂಗೀಕರಿಸಲಾಗಿದೆ ಎಂದ ಅವರು, “”ಮುಸ್ಲಿಂ ಸಮುದಾಯದ ಮಹಿಳೆಯರ ರಕ್ಷಣೆಗಾಗಿ ತ್ರಿವಳಿ ತಲಾಖ್‌ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವ ಪ್ರಯತ್ನ ಮಾಡಲಾಗಿದೆ” ಎಂದರು.

ಇನ್ನಷ್ಟು ಪದಕ ಗೆಲ್ಲಿ:
ಏಷ್ಯನ್‌ ಗೇಮ್ಸ್‌ನಲ್ಲಿ ದೇಶದ ಮಹಿಳಾ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪದಕ ಗೆಲ್ಲುತ್ತಿರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ ಪ್ರಧಾನಿ. ಇದು ದೇಶದಲ್ಲಿರುವ ಇತರ ಕ್ರೀಡಾಪಟುಗಳಿಗೆ ಪ್ರೋತ್ಸಾಹದಾಯಕ ಎಂದರಲ್ಲದೆ, ಈಗಾಗಲೇ ಪದಕ ಗೆದ್ದವರಿಗೆ ಅಭಿನಂದನೆಗಳನ್ನೂ ತಿಳಿಸಿದ್ದಾರೆ.

ಡಾ.ವಿಶೇಶ್ವರಯ್ಯ ವಿಶ್ವಮಾನ್ಯರು
“”ದೇಶದಲ್ಲಿ ಹಲವು ಮಂದಿ ಇಂಜಿನಿಯರ್‌ಗಳು ಆಗಿ ಹೋಗಿದ್ದಾರೆ. ನಾಡಿಗೆ ಅವರ ಕೊಡುಗೆಗಳು ಅನನ್ಯ. ಆದರೆ, ತಮ್ಮ ಕೆಲಸ ಮತ್ತು ಸಾಧನೆಯಿಂದ ವಿಶ್ವಮಾನ್ಯರಾಗಿ ಉಳಿದುಕೊಂಡವರು ಭಾರತ ರತ್ನ ಡಾ.ಎಂ.ವಿಶ್ವೇಶ್ವರಯ್ಯ. ಅವರಿಂದ ನಿರ್ಮಿತವಾದ ಕೃಷ್ಣರಾಜ ಸಾಗರ ಅಣೆಕಟ್ಟಿನಿಂದ ಲಕ್ಷಾಂತರ ಮಂದಿ ರೈತರು ಮತ್ತು ಇತರರು ಹಲವಾರು ರೀತಿಯಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ. ಅವರ ಸಾಧನೆ ಪರಿಗಣಿಸಿಯೇ ಪ್ರತಿ ವರ್ಷದ ಸೆ. 15ರಂದು ಇಂಜಿನಿಯರ್‌ಗಳ ದಿನ ಎಂದು ಆಚರಿಸಲಾಗುತ್ತದೆ. ಅವರಿಂದಾಗಿಯೇ ದೇಶದ ತಂತ್ರಜ್ಞರು ವಿಶ್ವ ಮಟ್ಟದಲ್ಲಿ ಗುರುತು ಪಡೆಯುವಂತಾಯಿತು” ಎಂದು ಪ್ರಧಾನಿ ಮೋದಿ ಹೇಳಿದರು.

ಶಿವಮೊಗ್ಗದ ಮತ್ತೂರು ಪ್ರಸ್ತಾಪ
ಸಂಸ್ಕೃತ ಭಾಷೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, “”ಆ ಭಾಷೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ, ಆರೋಗ್ಯ, ಗಣಿತ, ವ್ಯವಹಾರ ಆಡಳಿತ, ಹಣಕಾಸು ಮತ್ತು ಪರಿಸರ ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಸಂಸ್ಕೃತ ಭಾಷೆಯಲ್ಲಿದೆ. ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮಸ್ಥರು ಸಂಸ್ಕೃತವನ್ನೇ ಬಳಸುತ್ತಿದ್ದಾರೆ” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next