ವಾಷಿಂಗ್ಟನ್ ಡಿಸಿ: ಎರಡು ವರ್ಷಗಳ ಬಳಿಕ ಅಮೆರಿಕ ಪ್ರವಾಸಕ್ಕೆ ಹೊರಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾಷಿಂಗ್ಟನ್ ತಲುಪಿದರು. ವಿಮಾನದಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕದಲ್ಲಿನ ಭಾರತೀಯ ಸಮುದಾಯದವರು ಬರಮಾಡಿಕೊಂಡರು.
ಬುಧವಾರ ಮಧ್ಯಾಹ್ನ ಹೊಸದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಆರಂಭಿಸಿದ ಪಿಎಂ ಮೋದಿ ಭಾರತೀಯ ಕಾಲಮಾನ ಗುರುವಾರ ಬೆಳಗಿನ ಜಾವ (ಯುಎಸ್ ಕಾಲಮಾನ ಬುಧವಾರ ಸಂಜೆ) ವಾಷಿಂಗ್ಟನ್ ಡಿಸಿ ತಲುಪಿದರು.
ವಾಷಿಂಗ್ಟನ್‌ಗೆ ಬಂದಿಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಮುಂದಿನ ಎರಡು ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದಾ ಸುಗಾ ಅವರನ್ನು ಭೇಟಿ ಮಾಡಲಿದ್ದೇನೆ. ಕ್ವಾಡ್ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಹಾಗೂ ಭಾರತದಲ್ಲಿನ ಅವಕಾಶಗಳ ಕುರಿತು ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆ ಮಾತುಕತೆ ನಡೆಸಲಿದ್ದೇನೆ’ ಎಂದಿದ್ದಾರೆ.
ಈ ಪ್ರವಾಸ ಹಲವಾರು ವಿಶೇಷಗಳಿಗೂ ಕಾರಣವಾಗಿದೆ. 2019ರ ಸೆಪ್ಟಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾಗಿದ್ದ ಮೋದಿ, ಬಳಿಕ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವುದು ಈಗಲೇ. ಅಷ್ಟೇ ಅಲ್ಲ ಬೈಡೆನ್ ಅಧ್ಯಕ್ಷರಾದ ಮೇಲೆಯೂ ಇದೇ ಮೊದಲ ಬಾರಿಗೆ ಮುಖಾಮುಖೀಯಾಗುತ್ತಿರುವುದು. ವಿದೇಶಾಂಗ ಸಚಿವ ಜೈಶಂಕರ್ ಮತ್ತು ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಧಾನಿಗೆ ಸಾಥ್ ನೀಡಿದ್ದಾರೆ.
ಇದನ್ನೂ ಓದಿ:ಭಯೋತ್ಪಾದನೆಯ ಮೂಲೋತ್ಪಾಟನೆಗೆ ಮೊಳಗೀತೇ ರಣಕಹಳೆ?
ಹೊರಡುವ ಮುನ್ನ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೈಡೆನ್ ಜತೆಗಿನ ದ್ವಿಪಕ್ಷೀಯ ಮಾತುಕತೆ, ಬಾಂಧವ್ಯ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದಿದ್ದಾರೆ.