ಅಮೇಠಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಲೋಕಸಭೆ ಕ್ಷೇತ್ರ ಅಮೇಠಿಯಲ್ಲಿ ಕಲಾಶ್ನಿಕೋವ್ ಮಾದರಿಯ ರೈಫಲ್‌ಗಳನ್ನು ಉತ್ಪಾದಿಸುವ ಕಾರ್ಖಾನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಭಾರತ ಹಾಗೂ ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಈ ಕಾರ್ಖಾನೆಯಲ್ಲಿ 7.50 ಲಕ್ಷ ಸುಧಾರಿತ ಎ.ಕೆ. 203 ರೈಫಲ್‌ಗಳನ್ನು ತಯಾರಿಸಿ ಸೇನೆಗೆ ಒದಗಿಸಲಾಗುತ್ತದೆ. ದೇಶದಲ್ಲಿ ಇನ್ನು ಮೇಡ್ ಇನ್ ಅಮೇಠಿ ರೈಫಲ್‌ಗಳು ಸೇನೆಗೆ ಲಭ್ಯವಾಗಲಿದ್ದು, ಉಗ್ರರು ಮತ್ತು ನಕ್ಸಲರ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಶಕ್ತಿ ನೀಡಲಿವೆ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮೋದಿ, 2007ರಲ್ಲಿ ಕಾಂಗ್ರೆಸ್ ಅಧ್ಯಕ್ಷರು ಈ ಕಾರ್ಖಾನೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆಗ 2010ರಲ್ಲಿ ಕೆಲಸ ಆರಂಭವಾಗಲಿದೆ ಎಂದಿದ್ದರು. ಆದರೆ ಈ ಘಟಕದಲ್ಲಿ ಯಾವ ರೀತಿಯ ಶಸ್ತ್ರಾಸ್ತ್ರ ತಯಾರಿಸಬೇಕು ಎಂಬುದನ್ನೇ ಸರಕಾರ ನಿರ್ಧರಿಸಿರಲಿಲ್ಲ. ಇನ್ನು ಮುಂದೆ, ಅಮೇಠಿಯನ್ನು ಇಲ್ಲಿಂದ ಆಯ್ಕೆಯಾಗುವ ನಾಯಕರಿಂದ ಗುರುತಿಸುವುದಿಲ್ಲ. ಬದಲಿಗೆ ಇಲ್ಲಿ ನಡೆಸಿದ ಚx ಯೋಜನೆ ಗಳ ಆಧಾರದಲ್ಲಿ ಗುರುತಿಸಲಾಗುತ್ತದೆ ಎಂದಿದ್ದಾರೆ. ಪ್ರಧಾನಿ ಯಾದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಅಮೇಠಿಗೆ ಭೇಟಿ ನೀಡಿದ್ದಾರೆ. “”ಇದು ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್‌ಗೆ ಉತ್ತಮ ಉದಾಹರಣೆ. ನಾವು ಈ ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಇಲ್ಲಿನ ಜನರ ಹೃದಯವನ್ನು ಗೆದ್ದಿದ್ದೇವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗಿಂತ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಇಲ್ಲಿನ ಬಿಜೆಪಿ ಅಭ್ಯರ್ಥಿ ಸ್ಮತಿ ಇರಾನಿ ಮಾಡಿದ್ದಾರೆ ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 2014ರಲ್ಲಿ ರಾಹುಲ್ ವಿರುದ್ಧ ಸ್ಮತಿ ಇರಾನಿ ಸ್ಪರ್ಧಿಸಿ ಸೋತಿದ್ದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರ ಸಹಕಾರದಿಂದ ತ್ವರಿತವಾಗಿ ಈ ಕಾರ್ಖಾನೆ ನಿರ್ಮಿಸಲು ಸಾಧ್ಯವಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸೇನೆಗೆ ಅತ್ಯಾಧುನಿಕ ಎಕೆ 203 ರೈಫಲ್ ಶಕ್ತಿ
ಪುಲ್ವಾಮಾ ದಾಳಿಯ ಅನಂತರದಲ್ಲಿ ಗಡಿಯಲ್ಲಿರುವ ನಮ್ಮ ಯೋಧರ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಅಮೇಠಿಯಲ್ಲಿ ಆರ್ಡಿನನ್ಸ್ ಫ್ಯಾಕ್ಟರಿ ಮಹತ್ವದ್ದಾಗಿದೆ.
ರಷ್ಯಾದ ಕಲಾಶ್ನಿಕೋವ್ ಕಂಪೆನಿಯ ಜೊತೆಗೆ ಸಹಭಾಗಿತ್ವದಲ್ಲಿ ಈ ಫ್ಯಾಕ್ಟರಿ ಯನ್ನು ಸ್ಥಾಪಿಸಲಾಗಿದ್ದು, ಎಕೆ 47 ರೈಫಲ್‌ಗಿಂತಲೂ ಹೆಚ್ಚು ಸುಧಾರಿತವಾದ ಎಕೆ 203 ರೈಫಲ್‌ಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಒಪ್ಪಂದದ ಪ್ರಕಾರ 7.50 ಲಕ್ಷ ಎ.ಕೆ. 203 ರೈಫಲ್‌ಗಳನ್ನು ತಯಾರಿಸಿ ಭಾರತೀಯ ಸೇನೆಗೆ ಒದಗಿಸಲಾಗುತ್ತದೆ. ಸದ್ಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರಿದಂತೆ ಹಲವು ಭದ್ರತಾ ಪಡೆಗಳು ಇನ್ಸಾಸ್ ರೈಫಲ್‌ಗಳನ್ನು ಬಳಸುತ್ತಿವೆ.
ಮೊದಲ ಹಂತದಲ್ಲಿ ಸೇನೆಗೆ ಈ ರೈಫಲ್‌ಗಳನ್ನು ನೀಡಲಾಗುತ್ತದೆ. ನಂತರ ಇದನ್ನು ಅರೆ ಸೇನಾ ಪಡೆ ಹಾಗೂ ರಾಜ್ಯ ಪೊಲೀಸರಿಗೂ ನೀಡಲಾಗುತ್ತದೆ. ಮುಂದಿನ 10-15 ವರ್ಷಗಳಲ್ಲಿ ಇಡೀ ದೇಶದ ಎಲ್ಲ ಭದ್ರತಾ ಪಡೆಗಳೂ ಎಕೆ 203 ರೈಫಲ್‌ಗಳನ್ನು ಹೊಂದಿರಲಿವೆ. ದೇಶದೊಳಗೇ ಈ ಶಸ್ತ್ರ ಉತ್ಪಾದನೆ ಯಾಗುವುದರಿಂದ, ಬಿಡಿ ಭಾಗ ಪೂರೈಕೆ ಹಾಗೂ ರಿಪೇರಿ ಸುಲಭವಾಗಲಿದೆ.
ಇನ್ನೊಂದೆಡೆ ಗಡಿಯಲ್ಲಿ ಪಹರೆಯಲ್ಲಿ ತೊಡಗಿರುವ ಸೇನೆ ಸಿಬಂದಿಗೆ ಎಕೆ 203 ಗಿಂತ ಅತ್ಯಾಧುನಿಕ 7.69 ಎಂಎಂ 59 ಕ್ಯಾಲಿಬರ್ ರೈಫಲ್‌ಗಳನ್ನು ಒದಗಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ರಕ್ಷಣಾ ಇಲಾಖೆಯು ಅಮೆರಿಕದ ಸಿಗ್ ಸಾಸರ್ ಕಂಪೆನಿ ಜೊತೆಗೆ ಒಪ್ಪಂದ ಸಹಿ ಹಾಕಿದೆ. ಗಡಿಯಲ್ಲಿ ಪಾಕಿಸ್ಥಾನದ ಸೇನೆಯನ್ನು ಹಾಗೂ ಉಗ್ರರನ್ನು ಎದುರಿಸುವ ಯೋಧರ ಜೊತೆಗೇ ದೇಶದೊಳಗೆ ಭದ್ರತೆಯ ಉಸ್ತುವಾರಿ ವಹಿಸುವ ಪಡೆಗಳಿಗೆ ಅತ್ಯಂತ ಸುಧಾರಿತ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಇದಾಗಿದೆ.
ಈ ಘಟಕವು ಭಾರತ ಮತ್ತು ರಷ್ಯಾ ಮಧ್ಯದ ಸ್ನೇಹದ ಇನ್ನೊಂದು ಸೂಚಕವಾಗಿದೆ.
– ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ