ಆಗ್ರಾ:ಸುಮಾರು ಎಂಟು ಸಾವಿರ ಕೋಟಿ ರೂಪಾಯಿ ವೆಚ್ಚದ ಆಗ್ರಾ ಮೆಟ್ರೋ ರೈಲು ಯೋಜನೆಯ ಕಾಮಗಾರಿ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ( ಡಿಸೆಂಬರ್ 07, 2020) ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉತ್ತರಪ್ರದೇಶ ಗವರ್ನರ್ ಆನಂದಿಬೆಲ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಇತರ ಗಣ್ಯರು ಭಾಗವಹಿಸಿದ್ದರು ಎಂದು ವರದಿ ತಿಳಿಸಿದೆ. ಆಗ್ರಾದ 15ನೇ ಬೆಟಾಲಿಯನ್ ಪಿಎಸಿ ಪರೇಡ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೆಟ್ರೋ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಇದು 8 ಸಾವಿರ ಕೋಟಿ ರೂಪಾಯಿಗಳ ಯೋಜನೆಯಾಗಿದೆ. ಈ ಮೂಲಕ ಆಗ್ರಾಕ್ಕೆ ಉತ್ತಮ ಸೌಲಭ್ಯ ಲಭ್ಯವಾಗಬೇಕೆಂಬ ಯೋಜನೆ ಮತ್ತಷ್ಟು ಬಲಗೊಂಡಂತಾಗಿದೆ. ಇತ್ತೀಚೆಗೆ ನಡೆದ ಪ್ರತಿ ಚುನಾವಣೆಯಲ್ಲಿಯೂ ಭಾರತದ ಸಹೋದರಿಯರು, ರೈತರು, ಕಾರ್ಮಿಕರು ಹಾಗೂ ಉದ್ಯಮಿಗಳಲ್ಲಿ ನಂಬಿಕೆ ಕಂಡು ಬಂದಿದೆ. ಹೈದರಾಬಾದ್ ಚುನಾವಣೆಯಲ್ಲಿಯೂ ಬಡವರು ಮತ್ತು ಮಧ್ಯಮ ವರ್ಗದ ಜನರು ನಮಗೆ ಹೆಚ್ಚಿನ ಶಕ್ತಿ ನೀಡಿದ್ದಾರೆ. ನಿಮ್ಮ ಬೆಂಬಲವೇ ನನಗೆ ಪ್ರೇರಣೆ ಎಂದು ಹೇಳಿದರು.
ಇದನ್ನೂ ಓದಿ:ಡಾರ್ಕ್ ನೆಟ್ ರಹಸ್ಯ ಜಾಲ : ಮಾದಕ ವಸ್ತು ಖರೀದಿ ಭಯೋತ್ಪಾದನೆಗೆ ಪ್ರೇರಕ ತಂತು
ಈ ಹಿಂದೆ ಬದಲಾವಣೆ ಅಥವಾ ಸುಧಾರಣೆ ಅರ್ಧಂಬರ್ಧವಾಗಿ ನಡೆಯುತ್ತಿತ್ತು. ನಮ್ಮ ಸರ್ಕಾರ ಸಮಗ್ರ ಸುಧಾರಣೆ ಜಾರಿಗೆ ತರುತ್ತಿದೆ. ನಮ್ಮ ಸರ್ಕಾರ ನಗರದ ಮೂಲಭೂತ ಸೌಕರ್ಯಗಳ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿರುವುದಾಗಿ ಪ್ರಧಾನಿ ಮೋದಿ ತಿಳಿಸಿದರು.