ಹೊಸದಿಲ್ಲಿ : ಬಿಜೆಪಿ ಸರಕಾರದ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಉತ್ತರ ಪ್ರದೇಶದಲ್ಲಿ “ಮರ್ಯಾದಾ ಮನೆ’ ಎಂಬ ಹೆಸರಿನಲ್ಲಿ ಶೌಚಾಲಯ ನಿರ್ಮಾಣವಾಗುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಬಹುವಾಗಿ ಪ್ರಶಂಸಿಸಿದ್ದಾರೆ.
ಉತ್ತರ ಪ್ರದೇಶ ಸರಕಾರ ಶೌಚಾಲಯ ನಿರ್ಮಾಣಕ್ಕೆ “ಇಜ್ಜತ್ ಘರ್’ (ಮರ್ಯಾದಾ ಮನೆ) ಎಂಬ ಹೆಸರು ಕೊಟ್ಟಿರುವುದನ್ನು ಮೋದಿ “ಒಂದು ವಿಭಿನ್ನ ಹಾಗೂ ಅನನ್ಯ ಆಲೋಚನೆ’ ಎಂದು ಹೇಳಿದರು.
ಭಾರತೀಯ ಮಹಿಳೆಯ ಘನತೆ, ಗೌರವಗಳನ್ನು ಎತ್ತಿ ಹಿಡಿಯುವುದರ ಸಂಕೇತವಾಗಿ “ಮಾರ್ಯಾದಾ ಮನೆ” – “ಇಜ್ಜತ್ ಘರ್”ಎಂಬ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಉತ್ತರ ಪ್ರದೇಶ ಸರಕಾರ ಶೌಚಾಲಯಗಳ ನಿರ್ಮಾಣಕ್ಕೆ ತೊಡಗಿರುವುದು ಸ್ವಚ್ಚ ಭಾರತ ಅಭಿಯಾನಕ್ಕೆ ದೊರಕಿರುವ ಹೊಸ ಆಯಾಮವಾಗಿದೆ ಎಂದು ಮೋದಿ ಇಂದಿಲ್ಲಿ ಪ್ರಥಮ ಅಖೀಲ ಭಾರತ ಆಯುರ್ವೇದ ವಿದ್ಯಾಲಯವನ್ನು (ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ- ಎಐಐಎ) ಉದ್ಘಾಟಿಸಿ ಹೇಳಿದರು.
“ನಮ್ಮ ಸರಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಆಯುರ್ವೇದ ಮತ್ತು ಯೋಗದಿಂದ ಜೋಡಿಸುವುದಕ್ಕೆ ಮಹತ್ವ ನೀಡುತ್ತದೆ ಎಂದು ಮೋದಿ ಹೇಳಿದರು.
ಆಯುಷ್ ಸಚಿವಾಲಯವು ಅತ್ಯಂತ ಚುರುಕಿನಿಂದ ಈ ದಿಶೆಯಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಮೂರು ವರ್ಷಗಳಲ್ಲಿ 65ಕ್ಕೂ ಹೆಚ್ಚು ಆಯುಷ್ ಆಸ್ಪತ್ರೆಗಳನ್ನು ಸ್ಥಾಪಿಸಿದೆ ಎಂದವರು ಹೇಳಿದರು.
ತನ್ನ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಪಡದ ಯಾವ ದೇಶವೂ ಅಭಿವೃದ್ಧಿ ಸಾಧಿಸಲಾರದು ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.
ಸ್ವಚ್ಚ ಭಾರತ ಅಭಿಯಾನದಡಿ ತನ್ನ ವಾರಾಣಸಿ ಕ್ಷàತ್ರದಲ್ಲಿ 300ಕ್ಕೂ ಹೆಚ್ಚು ಗ್ರಾಮಗಳು ಬಯಲು ಶೌಚ ಮುಕ್ತ ಗ್ರಾಮಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.