ನವದೆಹಲಿ:ಭಾರತೀಯ ಜನತಾ ಪಕ್ಷಕ್ಕೆ 300ಕ್ಕಿಂತಲೂ ಹೆಚ್ಚು ಸ್ಥಾನ ಸಿಗುವುದು ಖಚಿತ. ಅಲ್ಲದೇ ಎರಡನೇ ಬಾರಿಯೂ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಮಹಾಸಮರದ ಅಂತಿಮ ಹಂತದ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದ ಬಳಿಕ ತಮ್ಮ ಸರ್ಕಾರದ 5 ವರ್ಷಗಳ ಸಾಧನೆಯ ಕುರಿತು ಮೊದಲ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನನಗೆ ಪೂರ್ಣ ವಿಶ್ವಾಸವಿದೆ ಬಿಜೆಪಿ 2019ರಲ್ಲಿಯೂ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ. ತುಂಬಾ ವರ್ಷಗಳ ಬಳಿಕ ಪೂರ್ಣ ಬಹುಮತದೊಂದಿಗೆ ಸರ್ಕಾರ ಅಧಿಕಾರಕ್ಕೇರುತ್ತಿರುವುದಾಗಿ ಮೋದಿ ಈ ಸಂದರ್ಭದಲ್ಲಿ ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಯಾವೆಲ್ಲ ಸಾಧನೆಗಳನ್ನು, ಅಭಿವೃದ್ಧಿಗಳನ್ನು ಮಾಡಿದೆ ಎಂಬುದನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಪ್ರಧಾನಿ ಮೋದಿ ಅವರು ಇಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು.
ಏತನ್ಮಧ್ಯೆ ನಾನು ಯಾವುದೇ ಪ್ರಶ್ನೆಗೆ ಉತ್ತರಿಸುವುದಿಲ್ಲ. ಯಾಕೆಂದರೆ ಪತ್ರಿಕಾಗೋಷ್ಠಿಯನ್ನು ಶಾ ನಡೆಸಿಕೊಡಲಿದ್ದಾರೆ. ಇದು ಬಿಜೆಪಿಯ ವ್ಯವಸ್ಥೆ. ಶಿಸ್ತನ್ನು ನಾವು ಅನುಸರಿಸಬೇಕಾಗಿದೆ ಎಂದು ಮೋದಿ ಹೇಳಿದರು. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು ಎಂದು ಮೋದಿ ಹೇಳಿದರು. ಪತ್ರಕರ್ತರ ಪ್ರಶ್ನೆಗೆ ಅಮಿತ್ ಶಾ ಅವರೇ ಉತ್ತರಿಸಿದರು.