ಹೊಸದಿಲ್ಲಿ : ಬಜೆಟ್ ಅಧಿವೇಶನದ ಎರಡನೇ ಹಂತದ ಕಲಾಪಕ್ಕಾಗಿ ಸಂಸತ್ತು ಇಂದಿನಿಂದ ಸಮಾವೇಶಗೊಂಡಿದ್ದು ಅರ್ಥಪೂರ್ಣ ಹಾಗೂ ರಚನಾತ್ಮಕ ಚರ್ಚೆಯನ್ನು ನಡೆಸುವಂತೆ ಹಾಗೂ ಅನುಮೋದನೆಗೆ ಬಾಕಿ ಇರುವ ಹಲಾವರು ಮಸೂದೆಗಳನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ಕೇಳಿಕೊಂಡಿದ್ದಾರೆ.
ಬಜೆಟ್ ಮೇಲೆ ವಿಸ್ತೃತ ಚರ್ಚೆ ನಡೆಯಲಿದ್ದು, ಚರ್ಚೆ ಮಟ್ಟವು ಉತ್ತಮ ಗುಣಮಟ್ಟದ್ದಾಗಿರುವುದೆಂಬ ವಿಶ್ವಾಸ ತನ್ನದಾಗಿದೆ ಎಂದು ಮೋದಿ ಹೇಳಿದ್ದಾರೆ.
ಇದೇ ಅಧಿವೇಶನದಲ್ಲಿ ಜಿಎಸ್‌ಟಿ ಸೀಮೋಲ್ಲಂಘನ ಸಾಧ್ಯವಾದೀತೆಂಬ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದರು.
ಅಮೆರಿಕದಲ್ಲಿ ಭಾರತೀಯರ ಮೇಲೆ ದಾಳಿ, ದೇಶದಲ್ಲಿ ಹಚ್ಚುತ್ತಿರುವ ಐಸಿಸ್ ಉಗ್ರ ಸಂಘಟನೆಯ ಚಟುವಟಿಕೆಗಳು ಮುಂತಾಗಿ ಹತ್ತಾರು ವಿಷಯಗಳನ್ನು ಎತ್ತಿಕೊಂಡು ಪ್ರಧಾನಿ ಮೋದಿ ಸರಕಾರದ ಮೇಲೆ ವಾಕ್ ದಾಳಿ ನಡೆಸುವ ಇರಾದೆ ವಿರೋಧ ಪಕ್ಷಗಳಿಗೆ ಇರುವಂತಿದೆ.
ಸದನದಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು “ಗುರುವಾರದಿಂದ ಆರಂಭಗೊಳ್ಳುವ ಬಜೆಟ್ ಅಧಿವೇಶನದ ಎರಡನೇ ಹಂತದ ಕಲಾಪದಲ್ಲಿ ತಮ್ಮ ಕಾಂಗ್ರೆಸ್ ಪಕ್ಷ ಅಮೆರಿಕದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದ್ವೇಷದ ದಾಳಿಗಳು ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಐಸಿಸ್ ಉಗ್ರರ ಚುಟುವಟಿಕೆಗಳನ್ನು ಮುಖ್ಯವಾಗಿ ಚರ್ಚಿಸಲಿದೆ’ ಎಂದು ಈಗಾಗಲೇ ಹೇಳಿದ್ದಾರೆ.