ಸಿಲ್ವಾಸ್ಸಾ: ವಿಪಕ್ಷಗಳ ಘಟಬಂಧನ್(ಮೈತ್ರಿ) ಕೇವಲ ಬಿಜೆಪಿ ವಿರುದ್ಧವಲ್ಲ. ಆದರೆ ಈ ಮೈತ್ರಿ ಈ ದೇಶದ ಜನ ವಿರೋಧಿ ನಡೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಬಾರದು ಎಂಬ ನಿಟ್ಟಿನಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಮಹಾಘಟಬಂಧನ್(ಮಹಾ ಮೈತ್ರಿ) ವಿರುದ್ಧ ಪ್ರಧಾನಿ ತೀವ್ರ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರದ ವಿರುದ್ಧದ ನನ್ನ ಕ್ರಮ ಕೆಲವು ಜನರನ್ನು ಕೆರಳಿಸಿಬಿಟ್ಟಿದೆ. ಆದರೆ ಇದು ಸಹಜವಾದ ನಡವಳಿಕೆ ಯಾಕೆಂದರೆ ಸಾರ್ವಜನಿಕರ ಹಣವನ್ನು ಲೂಟಿ ಮಾಡುವುದನ್ನು ನಾನು ತಡೆದಿದ್ದೇನೆ. ಈ ನಿಟ್ಟಿನಲ್ಲಿ ಇದೀಗ ಎಲ್ಲರೂ ಮೈತ್ರಿ ಮಾಡಿಕೊಂಡು ಮಹಾಘಟಬಂಧನ್ ಎಂದು ಒಗ್ಗಟ್ಟಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ದಾದ್ರ ಮತ್ತು ನಗರ್ ಹವೇಲಿ ರಾಜಧಾನಿ ಸಿಲ್ವಾಸ್ಸಾದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಾಘಟಬಂಧನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪಶ್ಚಿಮಬಂಗಾಳದಲ್ಲಿ ಬಿಜೆಪಿ ಕೇವಲ ಒಬ್ಬನೇ ಒಬ್ಬ ಶಾಸಕನನ್ನು ಹೊಂದಿದೆ. ಆದರೆ ಪ್ರತಿಪಕ್ಷಗಳಿಗೆ ಹೆದರಿ ಕಂಗಾಲಾಗಿ ಬಚಾವೋ(ರಕ್ಷಿಸಿ) ಎಂದು ಮಹಾಘಟಬಂಧನ್ ಹೆಸರಿನಲ್ಲಿ ಒಗ್ಗೂಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದರು.