ಹೊಸದಿಲ್ಲಿ : “ದ ಹೇಗ್’ ಭೇಟಿಯೊಂದಿಗೆ ಕೊನೆಗೊಂಡ ಮೂರು ರಾಷ್ಟ್ರಗಳ ಯಶಸ್ವೀ ಭೇಟಿ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ ಬೆಳಗ್ಗೆ ರಾಷ್ಟ್ರ ರಾಜಧಾನಿ ದಿಲ್ಲಿಗೆ ಮರಳಿದರು.
ಪ್ರಧಾನಿ ಮೋದಿ ಅವರನ್ನು ವಿದೇವ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಪ್ರಧಾನಿ ಮೋದಿ ಅವರು ಮೂರು ದೇಶಗಳ ತಮ್ಮ ಪ್ರವಾಸದ ಮೊದಲ ಚರಣದಲ್ಲಿ ಪೋರ್ಚುಗಲ್ ಗೆ ಭೇಟಿ ನೀಡಿ ಅಲ್ಲಿನ ಪ್ರಧಾನಿಯಾದ ಗೋವಾ ಮೂಲದ ಅಂಟೋನಿಯೋ ಕೋಸ್ಟಾ ಅವರನ್ನು ಕಂಡು ಚರ್ಚೆ-ಮಾತುಕತೆ ನಡೆಸಿ 11 ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದ್ದರು.
ಪೋರ್ಚುಗಲ್ ಬಳಿಕ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದ ಪ್ರಧಾನಿ ಮೋದಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಡನೆ ಅತ್ಯಂತ ಸೌಹಾರ್ದದ ಐತಿಹಾಸಿಕ ಭೇಟಿಯನ್ನು ನಡೆಸಿ ನೇರ ಮಾತುಕತೆ ನಡೆಸಿದ್ದರು.
ತಮ್ಮ ಈ ಪ್ರವಾಸದ ಅಂತಿಮ ಚರಣದಲ್ಲಿ ಮೋದಿ ಅವರು ನಿನ್ನೆ ಮಂಗಳವಾರ ನೆದರ್ಲಂಡ್ಸ್ ಗೆ ಭೇಟಿ ನೀಡಿದ್ದರು. ಅಲ್ಲಿ ಡಚ್ ಪ್ರಧಾನಿ ಮಾರ್ಕ್ ರುಟೆ ಅವರೊಂದಿಗೆ ಮಾತುಕತೆ ನಡೆಸಿ ಭಯೋತ್ಪಾದನೆ ವಿರುದ್ಧ ಹೋರಾಡುವ ಜಂಟಿ ಹೇಳಿಕೆಯನ್ನು ಹೊರಡಿಸಿದ್ದರು.