ವಿಶ್ವಸಂಸ್ಥೆ: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಶ್ವಸಂಸ್ಥೆಯಲ್ಲಿ ನಡೆದ 76ನೇ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಹಿಂದಿ ಭಾಷೆಯಲ್ಲಿ ಮಾತನಾಡಿದ ಮೋದಿ ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಭಯೋತ್ಪಾದನೆ ಬಗ್ಗೆ ಉಲ್ಲೇಖಿಸಿ ಪಾಕಿಸ್ತಾನ ಹಾಗೂ ಚೀನಾ ದೇಶಗಳಿಗೆ ಟಾಂಗ್ ನೀಡಿದರು.
ಭಯೋತ್ಪಾದನೆ ಇಂದು ವಿಶ್ವಕ್ಕೆ ಕಂಟಕವಾಗಿದೆ. ಭಯೋತ್ಪಾದನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಉಗ್ರರನ್ನು ರಾಜಕೀಯ ದಾಳವಾಗಿ ಬಳಸಲಾಗುತ್ತಿದೆ. ಭಯೋತ್ಸಾದನೆ ಅವರಿಗೂ ತೊಂದರೆ ನೀಡುತ್ತೆ ಎನ್ನುವ ಮೂಲಕ ಉಗ್ರ ಪೋಷಕ ಪಾಕಿಸ್ತಾನಕ್ಕೆ ಮೋದಿ ಟಾಂಗ್ ನೀಡಿದರು.
ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿಯನ್ನು ಯಾವ ದೇಶವೂ ತನ್ನ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ ಮೋದಿ, ಭಯೋತ್ಪಾದನೆ ವಿರುದ್ಧ ಇಡೀ ಜಗತ್ತು ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದರು.
ಇನ್ನು ಭಾರತ ಸ್ವಾತಂತ್ರ್ಯದ 75ನೇ ವಸಂತ ಪ್ರವೇಸಿಸಿದೆ. ಭಾರತ ಉಜ್ವಲ ಪ್ರಜಾಪ್ರಭುತ್ವಕ್ಕೆ ಒಂದು ಉದಾಹರಣೆಯಾಗಿದೆ. ಪ್ರಜಾಪ್ರಭುತ್ವದಿಂದ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂದರು.
ಭಾರತದ ಪ್ರಧಾನಿಯಾಗಿ ವಿಶ್ವಸಂಸ್ಥೆಯಲ್ಲಿ ನಾಲ್ಕು ಭಾರಿ ಭಾಷಣ ಮಾಡಿದ್ದೇನೆ ಎಂದು ಹೇಳಿದ ಮೋದಿ, ದೇಶದ ಜನಸೇವೆ ಮಾಡುತ್ತಾ 20 ವರ್ಷ ಕಳೆದಿದ್ದೇನೆ. ಭಾರತದಲ್ಲಿ ಅಭಿವೃದ್ಧಿಯಿಂದ ಯಾರನ್ನೂ ಹೊರಗಿಟ್ಟಿಲ್ಲ. ಭಾರತದಲ್ಲಿ 43 ಕೋಟಿ ಜನರಿಗೆ ಬ್ಯಾಂಕಿಂಗ್ ಸೇವೆ ನೀಡಿದ್ದೇವೆ. 50 ಕೋಟಿ ಜನರಿಗೆ ಉಚಿತ ಆರೋಗ್ಯ ಸೌಲಭ್ಯ ನೀಡಿದ್ದೇವೆ. 23 ಕೋಟಿ ಜನರಿಗೆ ವಿಮೆಯನ್ನು ನೀಡಿದ್ದೇವೆ. 3 ಕೋಟಿ ಜನರಿಗೆ ಪಕ್ಕಾ ಮನೆ ನಿರ್ಮಿಸಿದ್ದೇವೆ ಎಂದರು.