Advertisement

ಯಶಸ್ಸು ಕಂಡ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

11:47 PM Sep 26, 2021 | Team Udayavani |

ಪ್ರಧಾನಿ ಮೋದಿ ಅವರ ಬಹುನಿರೀಕ್ಷಿತ ಅಮೆರಿಕ ಭೇಟಿ ಮುಕ್ತಾಯ ಗೊಂಡಿದೆ. ಜೋ ಬೈಡೆನ್‌ ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಆ ದೇಶಕ್ಕೆ ಪ್ರವಾಸ ಕೈಗೊಂಡ‌ ಮೋದಿ ಅವರು ತಮ್ಮ ಭೇಟಿಯ ಉದ್ದಕ್ಕೂ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಜತೆಜತೆಯಲ್ಲಿ ಭಯೋ ತ್ಪಾದನೆಯನ್ನು ಬೇರು ಸಹಿತ ಕಿತ್ತೂಗೆಯಲು ಜಾಗತಿಕ ಸಮುದಾಯ ಕೈಜೋಡಿಸಬೇಕಾದ ಅನಿವಾರ್ಯತೆಯನ್ನು ಬಲವಾಗಿ ಪ್ರತಿಪಾದಿ ಸಿದ್ದಾರೆ. ಈ ಕರೆಗೆ ಇತರ ರಾಷ್ಟ್ರಗಳ ನಾಯಕರು ಕೂಡ ಸಹಮತ ವ್ಯಕ್ತಪಡಿಸಿರುವುದು ಭಾರತದ ನಿಲುವಿಗೆ ಯಶಸ್ಸು ಲಭಿಸಿದಂತಾಗಿದೆ.

Advertisement

ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಜತೆಗಿನ ಭೇಟಿ, ಕ್ವಾಡ್‌ ಶೃಂಗ ಸಭೆ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲೂ ಭಯೋತ್ಪಾದನೆಯ ವಿಚಾರವನ್ನು ಪ್ರಸ್ತಾವಿಸಿ ವಿಶ್ವಶಾಂತಿಯ ದೃಷ್ಟಿಯಿಂದ ಉಗ್ರ ವಾ ದದ ಮೂಲೋತ್ಪಾಟನೆ ಅನಿವಾರ್ಯ ಎಂದು ಘಂಟಾಘೋಷವಾಗಿ ಸಾರಿದರು. ಇದೇ ವೇಳೆ ಭಯೋತ್ಪಾದನೆಗೆ ಉತ್ತೇಜನ, ನೆರವು ನೀಡುತ್ತಿರುವ ಪಾಕಿಸ್ಥಾನ, ತೀವ್ರಗಾಮಿ ನಡೆಯ ಮೂಲಕ ವಿಸ್ತರಣವಾದಿ ನಿಲುವಿಗೆ ಅಂಟಿಕೊಂಡಿರುವ ಚೀನದ ವಿರುದ್ಧವೂ ಪರೋಕ್ಷವಾಗಿ ವಾಗ್ಧಾಳಿ ನಡೆಸಿ ಆ ರಾಷ್ಟ್ರಗಳ ಮುಖಂಡರಿಗೆ ಎಚ್ಚರಿಕೆ ನೀಡಲು ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡರು.

ಅಮೆರಿಕ ಅಧ್ಯಕ್ಷ, ಉಪಾಧ್ಯಕ್ಷರೊಂದಿಗಿನ ಭೇಟಿ ವೇಳೆ ಮೋದಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಹೊಸ ಭಾಷ್ಯ ಬರೆದಿದ್ದಾರೆ. ಜಾಗತಿಕ ಸಮಸ್ಯೆಗಳು ಮತ್ತವುಗಳ ಪರಿಹಾರೋಪಾಯಗಳ ಬಗೆಗೆ ವಿಸ್ತೃತ ಚರ್ಚೆ ನಡೆಸುವ ಜತೆಯಲ್ಲಿ ಉಭಯ ದೇಶಗಳ ನಡುವಣ ವ್ಯೂಹಾತ್ಮಕ ಸಂಬಂಧ, ವಾಣಿಜ್ಯ, ವ್ಯಾಪಾರ, ತಂತ್ರಜ್ಞಾನ, ರಕ್ಷಣೆ ಸಹಿತ ವಿವಿಧ ವಿಷಯಗಳ ಕುರಿತಂತೆ ಸಮಾಲೋಚನೆ ನಡೆಸಿ ಉಭಯ ದೇಶಗಳ ನಡುವಣ ಸಂಬಂಧವನ್ನು ಇನ್ನಷ್ಟು ವೃದ್ಧಿಸುವ ಭರವಸೆಯನ್ನು ಆ ನಾಯಕರಿಂದ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

ಇದೇ ವೇಳೆ ನಡೆದ ಕ್ವಾಡ್‌ ಶೃಂಗದ ಪಾರ್ಶ್ವದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸನ್‌ ಮತ್ತು ಜಪಾನ್‌ ಪ್ರಧಾನಿ ಯೊಶಿಹಿಡೆ ಸುಗಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ ಅವರು ತಂತ್ರಜ್ಞಾನಗಳ ವಿನಿಮಯ, ಉತ್ಪಾದನ ವಲಯ ಮತ್ತು ಕೌಶಲಾಭಿವೃದ್ಧಿಯಲ್ಲಿ ಹೊಸದಾಗಿ ಭಾಗೀದಾರಿಕೆ ಆದಿಯಾಗಿ ವಿವಿಧ ವಿಷಯಗಳ ಬಗೆಗೆ ಚರ್ಚಿಸಿದರು. ಇದೇ ವೇಳೆ ಈ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯವನ್ನು ಬಲಗೊಳಿಸುವ ಇಂಗಿತವನ್ನು ಈ ನಾಯಕರು ವ್ಯಕ್ತಪಡಿಸಿದ್ದು ಭಾರತದ ಮಟ್ಟಿಗೆ ಇದು ಹೆಚ್ಚಿನ ನಿರೀಕ್ಷೆಯನ್ನು ಮೂಡಿಸಿದೆ.

Advertisement

ಇವೆಲ್ಲವುಗಳಿಗಿಂತ ಮುಖ್ಯವಾಗಿ ಪ್ರಧಾನಿ ಮೋದಿ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ ಜಾಗತಿಕ ಕಂಪನಿಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಮಾಲೋಚನೆ ವೇಳೆ ಅವರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಅಡೋಬ್‌, ಕ್ವಾಲ್ಕಮ್‌, ಫ‌ಸ್ಟ್‌ ಸೋಲಾರ್‌, ಜನರಲ್‌ ಅಟಾಮಿಕ್ಸ್‌, ಬ್ಲ್ಯಾಕ್‌ಸ್ಟೋನ್‌ ಕಂಪೆನಿಗಳ ಸಿಇಒಗಳ ಜತೆ ಮಹತ್ವದ ಮಾತುಕತೆ ನಡೆಸಿದ ಮೋದಿ ಅವರು ದೇಶದಲ್ಲಿ ನವೋದ್ಯಮಗಳ ಸ್ಥಾಪನೆಗಾಗಿ ಹೂಡಿಕೆ ಮಾಡುವಂತೆ ಮುಕ್ತ ಆಹ್ವಾನ ನೀಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಉದ್ಯಮ ರಂಗದ ದಿಗ್ಗಜರು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next