Advertisement

ರಾಮಾಯಣ ವಿವಾದ

08:15 AM Feb 09, 2018 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕಿ ರೇಣುಕಾ ಚೌಧರಿ ಅವರ ಕುರಿತು ಪ್ರಧಾನಿ ಮೋದಿ ಅವರು ನೀಡಿದ ಹೇಳಿಕೆ ಗುರುವಾರ ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಜತೆಗೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕೆಂದು ಟಿಡಿಪಿ ಸದಸ್ಯರೂ ನಿರಂತರ ಪ್ರತಿಭಟನೆ ನಡೆಸಿದ ಕಾರಣ, ಮೇಲ್ಮನೆಯು ಗದ್ದಲದ ಗೂಡಾಗಿ ಪರಿಣಮಿಸಿತು.

Advertisement

ಮಾಜಿ ಸದಸ್ಯರಾದ ಫ್ರೀಡಾ ಟೋಪ್ನೊ ಅವರ ನಿಧನ ಹಿನ್ನೆಲೆಯಲ್ಲಿ ಕಲಾಪ ಆರಂಭವಾಗುತ್ತಲೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದಾದ ಕೂಡಲೇ ಕಾಂಗ್ರೆಸ್‌ ಸದಸ್ಯರು ಆಸನದಿಂದ ಎದ್ದು, ಚೌಧರಿ ವಿರುದ್ಧದ ಮೋದಿ ಹೇಳಿಕೆ ಖಂಡಿಸಿ ಪ್ರತಿಭಟಿಸತೊಡಗಿದರು. ಕೊನೆಗೆ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು. ಸಂಸತ್‌ಭವನದ ಹೊರಗೆ ಮಾತನಾಡಿದ ಚೌಧರಿ, “ಪ್ರಧಾನಿ ಮೋದಿ ಮಹಿಳೆಯರ ಸ್ಥಾನಮಾನಕ್ಕೆ ಅವಹೇಳನ ಮಾಡಿದ್ದಾರೆ. ನಾನು ಇಬ್ಬರು ಹೆಣ್ಣುಮಕ್ಕಳ ತಾಯಿ ಎಂಬುದು ನೆನಪಿರಲಿ. ನಗುವಿಗೇನೂ ಜಿಎಸ್‌ಟಿ ಹಾಕಿಲ್ಲ ತಾನೇ? ನಾನು ನಗುವುದನ್ನು ಮುಂದುವರಿಸುತ್ತೇನೆ,’ ಎಂದಿದ್ದಾರೆ.

ಏತನ್ಮಧ್ಯೆ, ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು ಚೌಧರಿ ಅವರ ಕಾಲೆಳೆಯುವಂತೆ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಅಪ್‌ಲೋಡ್‌ ಮಾಡಿದ್ದು, ನಂತರ ಡಿಲೀಟ್‌ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಚೌಧರಿ, “ಸಚಿವ ರಿಜಿಜು ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ’ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ನಾಯಕ ವಿನಯ್‌ ಸಹಸ್ರಬುದ್ಧೆ ಅವರು, ಪ್ರಧಾನಿ ಅವರಿಗೆ ಅಗೌರವ ತೋರಿಸಿದ್ದಕ್ಕಾಗಿ ಚೌಧರಿ ವಿರುದ್ಧವೂ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದಿದ್ದಾರೆ.

ಬುಧವಾರ ಪ್ರಧಾನಿ ಮಾತನಾಡುತ್ತಿದ್ದಾಗ, ಚೌಧರಿ  ಜೋರಾಗಿ ನಕ್ಕಿದ್ದರು. ಆಗ ಮೋದಿ “ರೇಣುಕಾ ಚೌಧರಿಗೆ ಏನೂ  ಹೇಳಬೇಡಿ. ರಾಮಾಯಣ ಧಾರಾವಾಹಿಯ ನಂತರ ಈಗ ಇಂಥದ್ದೊಂದು ನಗು ಕೇಳಲು ಸಿಕ್ಕಿದೆ. ಅದು ನಮ್ಮ ಸೌಭಾಗ್ಯ,’ ಎಂದಿದ್ದರು. 

ಪ್ರತಿಪಕ್ಷಗಳ ಆಕ್ಷೇಪ: ಇನ್ನು, ಲೋಕಸಭೆಯಲ್ಲಿ ಗುರುವಾರ ಬಜೆಟ್‌ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷಗಳು, ಕೇಂದ್ರ ಸರ್ಕಾರವು ಕೃಷಿ, ಶಿಕ್ಷಣ, ಆರೋಗ್ಯಸೇವೆ ಮತ್ತು ಮೂಲಸೌಕರ್ಯಕ್ಕೆ ಒತ್ತು ನೀಡಿಲ್ಲ ಎಂದು ಆರೋಪಿಸಿದವು. ಎನ್‌ಡಿಎ ಮಿತ್ರಪಕ್ಷ ಅಕಾಲಿ ದಳದ ಪ್ರೇಮ್‌ ಸಿಂಗ್‌ ಇದಕ್ಕೆ ಧ್ವನಿಗೂಡಿಸಿ, ಕೃಷಿ ಕ್ಷೇತ್ರದ ಸಂಕಷ್ಟಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದರು. 

Advertisement

2014ರಿಂದ ಈವರೆಗೆ 54 ಖಾಸಗಿ ಚಾನೆಲ್‌ಗ‌ಳು ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಯನ್ನು ಉಲ್ಲಂ ಸಿವೆ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. 

ನನ್ನನ್ನು ಶೂರ್ಪನಖೀಗೆ ಹೋಲಿಕೆ ಮಾಡಿರುವುದು ಎಷ್ಟು ಸರಿ? ಈ ರೀತಿ ಮಾಡುವ ಮೂಲಕ ಬಿಜೆಪಿ ನಾಯಕರು ಇಡೀ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ನಾನು ಇಬ್ಬರು ಹೆಣ್ಣುಮಕ್ಕಳ ತಾಯಿ ಎಂಬುದನ್ನೂ ಅವರು ಮರೆತಿದ್ದಾರೆ. ಪ್ರಧಾನಿ ಅವರು ಈ ರೀತಿ ಅವಹೇಳನ ಮಾಡಿರುವುದು ದುರದೃಷ್ಟಕರ.
ರೇಣುಕಾ ಚೌಧರಿ, ಕಾಂಗ್ರೆಸ್‌ ನಾಯಕಿ

ಚೌಧರಿ ಅವರು ನಗುವಾಗ ನಾನೂ ಸದನದಲ್ಲಿದ್ದೆ. ಅವರು ಪ್ರಧಾನಿ ಮೋದಿ ಅವರ ಬಗ್ಗೆ ಸಮಂಜಸವಲ್ಲದ ಪದ ಬಳಕೆ ಮಾಡುತ್ತಿದ್ದುದೂ ನನಗೆ ಕೇಳಿತು. ಅವರು ಮಾತ್ರ ಆ ರೀತಿ ಮಾತನಾಡಬಹುದು, ಆದರೆ ಇನ್ನೊಬ್ಬರು ಅವರ ಬಗ್ಗೆ ಮಾತನಾಡಿದರೆ, “ಮಹಿಳೆ’ ಎಂಬ ಅಸ್ತ್ರವನ್ನು ಬಳಸಿಕೊಳ್ಳಲಾಗುತ್ತದೆ.
 ಸ್ಮತಿ ಇರಾನಿ, ಕೇಂದ್ರ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next