ಶಿವಮೊಗ್ಗ: ಮಹಾರಾಷ್ಟ್ರದ ಮುಖ್ಯಮಂತ್ರಿ ಏನು ಆಕಾಶದಿಂದ ಇಳಿದು ಬಂದಿಲ್ಲ. ಕಾಂಗ್ರೆಸ್ ಹಾಗೂ ಶಿವಸೇನೆ ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಸಿಎಂ ಹೀಗೆ ಪತ್ರ ಬರೆದಿದ್ದಕ್ಕೆ ರಾಜ್ಯದ ಕಾಂಗ್ರೆಸ್ ನವರು ಉತ್ತರ ಕೊಡಬೇಕು. ಅವರು ಏನು ಉತ್ತರ ಕೊಡ್ತಾರೆ ನೋಡಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಷೆ, ನೆಲ, ಜಲ, ಮಹಾಪುರುಷರ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಬರಬಾರದು. ಅವರು ಪತ್ರ ಬರೆದಿದ್ದಕ್ಕೆ ಪ್ರಧಾನಿ ಮೋದಿಯವರು ಸರಿಯಾದ ಉತ್ತರವನ್ನೇ ಕೊಡುತ್ತಾರೆ ಎಂದರು.
ಬೆಳಗಾವಿಯಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಎಂಇಎಸ್ ಪುಂಡಾಟಿಕೆ ಮಾಡುತ್ತಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸದಂತಹ ಬೇರೆ ಬೇರೆ ಕುತಂತ್ರ ಮಾಡುತ್ತಿದ್ದಾರೆ. ಇದನ್ನು ನಿಭಾಯಿಸುವ ಶಕ್ತಿ ಗೃಹ ಸಚಿವ ಆರಗ ಜ್ಞಾನೇಂದ್ರಗಿದ್ದು, ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಇಂತಹ ಕುತಂತ್ರ ಮಾಡುವವರಿಗೆ ರಾಜ್ಯ ಬಿಜೆಪಿ ಸರ್ಕಾರ ಸರಿಯಾದ ಉತ್ತರ ಕೊಡುತ್ತದೆ. ಕುತಂತ್ರ ಮಾಡುವ ವ್ಯಕ್ತಿಗಳ ಬಗ್ಗೆ ಸರ್ಕಾರ ಎಚ್ಚರವಾಗಿದೆ. ಜನರು ಸಹ ಎಚ್ಚರವಾಗಿರಬೇಕು. ಈಗಾಗಲೇ ಪ್ರತಿಮೆ ಧ್ವಂಸ ಮಾಡಿದ 27 ಜನರನ್ನು ಬಂಧಿಸಿದ್ದು, ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ:ಸಚಿವ ಕಾರಜೋಳ 5 ಸಾವಿರ ಮತ ಯಾರಿಗೆ ಹಾಕಿಸಿದರು:ಸುನಿಲ್ ಗೌಡ ಪ್ರಶ್ನೆ
ಡಿ.ಕೆ.ಶಿವಕುಮಾರ್ ಅವರು ಸಿ.ಟಿ.ರವಿಯವರನ್ನು ಲೂಟಿ ರವಿ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ.ಶಿವಕುಮಾರ್ ಅವರೇ ನೀವಾದರೂ ತಿಹಾರ್ ಜೈಲಿಗೆ ಹೋಗಿಬಂದಿದ್ದೀರಿ. ಸಿ.ಟಿ.ರವಿ ತಿಹಾರ್ ಗೂ ಹೋಗಿಲ್ಲ. ಯಾವುದೇ ಜೈಲಿಗೆ ಹೋಗಿಲ್ಲ. ನೀವು ತಿಹಾರ್ ಜೈಲಿಗೆ ಯಾಕೆ ಹೋಗಿದ್ದಿರಿ ಎಂದು ತುಂಬಾ ಸ್ಪಷ್ಟವಾಗಿ ಹೇಳಬೇಕು. ಅವರ ಮೇಲೆ ಯಾವುದೇ ಕೇಸ್ ಇಲ್ಲ. ಸಿ.ಟಿ.ರವಿಯಂತಹ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಟೀಕಿಸಿದ್ದಾರೆ. ನೀವು ಇನ್ಯಾರ ಬಗ್ಗೆಯಾದರೂ ಟೀಕೆ ಮಾಡಿ. ಪಕ್ಷದ ಸಮಸ್ಯೆ, ಸರ್ಕಾರದ ಸಮಸ್ಯೆ ಇದ್ದರೇ ಟೀಕೆ ಮಾಡಿ ಉತ್ತರ ಕೋಡುತ್ತೇವೆ. ಆದರೆ, ವೈಯಕ್ತಿಕವಾಗಿ ಸಿ.ಟಿ. ರವಿಯವರನ್ನು ಟೀಕಿಸಿದ್ದು, ರಾಜ್ಯದ ಕಾರ್ಯಕರ್ತರಿಗೆ ನೋವಾಗಿದೆ. ಲೂಟಿ ರವಿ ಎಂದಿದ್ದಕ್ಕೆ ಡಿ.ಕೆ. ಶಿವಕುಮಾರ್ ಕ್ಷಮೆ ಕೇಳಬೇಕು ಎಂದ ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯರಿಂದ ಸರ್ಕಾರದ ಟೀಕೆ ವಿಚಾರಕ್ಕೆ ಮಾತನಾಡಿದ ಅವರು, ಟೀಕೆ ಮಾಡುವುದನ್ನು ಬಿಟ್ಟು ಸಿದ್ದರಾಮಯ್ಯ ಸದನದಲ್ಲಿ ಚರ್ಚೆಗೆ ಬರಲಿ. ಒಂದು ವಾರ ಕಳೆಯಿತು. ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯೇ ಅಗಲಿಲ್ಲ. ಬಿಟ್ ಕಾಯಿನ್, 40% ಸರ್ಕಾರ ಎಂದು ಬಾಯಲ್ಲಿ ಹೇಳುತ್ತಿದ್ದಾರೆ. ದಾಖಲೆ ಕೊಡುತ್ತಿಲ್ಲ. ರಾಜಕಾರಣಕ್ಕೆ ಹೇಳುವುದು ಬಿಟ್ಟು ದಾಖಲೆ ಸಹಿತ ಕೊಟ್ಟರೆ, ಉತ್ತರ ಕೊಡುವ ಜಾಗದಲ್ಲೇ ಉತ್ತರ ಕೊಡುತ್ತೇವೆ ಎಂದರು.