ಕಾರ್ಗಿಲ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಕಾರ್ಗಿಲ್ ಗೆ ಆಗಮಿಸಿದ್ದು, ಸೈನಿಕರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಈ ವೇಳೆ ಮಾತನಾಡಿದ ಅವರು “ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸೇರ್ಪಡೆ ನಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ” ಎಂದು ಹೇಳಿದರು.
ಸೈನಿಕರನ್ನು ‘ತಮ್ಮ ಕುಟುಂಬ’ ಎಂದು ಸಂಬೋಧಿಸಿದ ಪ್ರಧಾನಿ ಮೋದಿ, ದೇಶವು ತನ್ನ ಗಡಿಯನ್ನು ಸುಭದ್ರವಾಗಿದ್ದಾಗ, ಆರ್ಥಿಕತೆಯು ಸದೃಢವಾಗಿದ್ದಾಗ ಮತ್ತು ಸಮಾಜವು ಆತ್ಮವಿಶ್ವಾಸದಿಂದ ತುಂಬಿರುವಾಗ ಸುರಕ್ಷಿತವಾಗಿರುತ್ತದೆ” ಎಂದು ಅವರು ಹೇಳಿದರು.
1999ರ ಯುದ್ದದ ಬಳಿಕ ಇಲ್ಲಿಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಅವರು, ಕಾರ್ಗಿಲ್ ನಲ್ಲಿ, ನಮ್ಮ ಸಶಸ್ತ್ರ ಪಡೆಗಳು ಭಯೋತ್ಪಾದನೆಯ ಹುನ್ನಾರವನ್ನು ಹತ್ತಿಕ್ಕಿದ್ದವು. ಜನರು ಅಂದು ಆಚರಿಸಿದ ದೀಪಾವಳಿಯನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ ಎಂದರು. “ಯುದ್ಧವನ್ನು ಹತ್ತಿರದಿಂದ ನೋಡಿದ್ದೇನೆ ಎಂದ ಅವರು, ಅಂದು ನನ್ನನ್ನು ಕಾರ್ಗಿಲ್‌ಗೆ ಕರೆತಂದದ್ದು ನನ್ನ ಕರ್ತವ್ಯ. ವಿಜಯದ ದನಿಗಳು ಸುತ್ತಲೂ ಪ್ರತಿಧ್ವನಿಸುತ್ತಿದ್ದ ಆ ಕಾಲದ ಅನೇಕ ನೆನಪುಗಳಿವೆ” ಎಂದರು.
ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಯುದ್ಧ ನಡೆಯುತ್ತಿದೆ ಮತ್ತು ಭ್ರಷ್ಟರು ಎಷ್ಟೇ ಬಲಶಾಲಿಯಾಗಿದ್ದರೂ ಅವರನ್ನು ಬಿಡಲಾಗುವುದಿಲ್ಲ ಎಂದು ಪಿಎಂ ಮೋದಿ ಹೇಳಿದರು.
ಇದಕ್ಕೂ ಮೊದಲು ಕಾರ್ಗಿಲ್ ನಲ್ಲಿ ಹುತಾತ್ಮರಾದ ಸೇನಾ ಯೋಧರಿಗೆ ಪುಷ್ಪಗುಚ್ಛ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು.