ಹೊಸದಿಲ್ಲಿ: ಉತ್ತರ ಪ್ರದೇಶದ ಗೌತಮ್ ಬುದ್ಧನಗರದ ಜೇವರ್‌ನಲ್ಲಿ ಗುರುವಾರ ಮಧ್ಯಾಹ್ನಒಂದು ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎನ್‌ಐಎ) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 10,050 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ವಿಮಾನ ನಿಲ್ದಾಣದ ಮೊದಲ ಹಂತದ ಅಭಿವೃದ್ಧಿ ಮಾಡಲಾಗುತ್ತಿದೆ.
1300 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಪೂರ್ಣಗೊಂಡ ಮೊದಲ ಹಂತದ ವಿಮಾನ ನಿಲ್ದಾಣವು ವರ್ಷಕ್ಕೆ ಸುಮಾರು 1.2 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಮೊದಲ ಹಂತದ ಏರ್ ಪೋರ್ಟ್ ಕೆಲಸವನ್ನು 2024 ರ ವೇಳೆಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಗೆ ಆಘಾತ: ಮಾಜಿ ಸಿಎಂ ಸೇರಿ 11 ಮಂದಿ ಶಾಸಕರು ಟಿಎಂಸಿ ಸೇರ್ಪಡೆ!
ಈ ಯೋಜನೆಯು ವಾಣಿಜ್ಯ, ಸಂಪರ್ಕ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಹೇಳಿದ್ದಾರೆ. “ನಾಳೆ, ನವೆಂಬರ್ 25 ಭಾರತ ಮತ್ತು ಉತ್ತರ ಪ್ರದೇಶದ ಮೂಲಸೌಕರ್ಯ ಸೃಷ್ಟಿಗೆ ಪ್ರಮುಖ ದಿನವಾಗಿದೆ. ಮಧ್ಯಾಹ್ನ 1 ಗಂಟೆಗೆ, ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆ ನಡೆಯಲಿದೆ. ಈ ಯೋಜನೆಯು ವಾಣಿಜ್ಯ, ಸಂಪರ್ಕ ಮತ್ತು ಪ್ರವಾಸೋದ್ಯಮಕ್ಕೆ ಗಮನಾರ್ಹವಾಗಿ ಉತ್ತೇಜನ ನೀಡಲಿದೆ” ಎಂದು ಪ್ರಧಾನಿ ಬುಧವಾರ ಟ್ವೀಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿಗಳ ಕಚೇರಿ (PMO) ಪ್ರಕಾರ ಉತ್ತರ ಪ್ರದೇಶವು ಐದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ಏಕೈಕ ರಾಜ್ಯವಾಗಲಿದೆ. ಈ ವಿಮಾನ ನಿಲ್ದಾಣವು ದೆಹಲಿ ಎನ್ ಸಿಆರ್ ನಲ್ಲಿ ಬರುವ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.