Advertisement

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

07:22 PM Dec 24, 2024 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಬುಂದೇಲ್‌ಖಂಡದ ಹಣೆಬರಹವನ್ನು ಬದಲಾಯಿಸುವ ಕೆನ್‌-ಬೆತ್ವಾ ನದಿ ಜೋಡಣೆ ಯೋಜನೆಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Advertisement

ಇದು ರಾಷ್ಟ್ರೀಯ ನದಿ ಜೋಡಣೆ ಕಾರ್ಯನೀತಿಯಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಮೊದಲ ಯೋಜನೆಯಾಗಿದೆ.

ಮಧ್ಯಪ್ರದೇಶದಲ್ಲಿ ಬರಗಾಲದ ಸ್ಥಿತಿಗೆ ತುತ್ತಾಗಿರುವ ಬುಂದೇಲ್‌ಖಂಡ ಪ್ರದೇಶಕ್ಕೆ ನೀರಾವರಿ, ಕುಡಿಯುವ ನೀರು ಮತ್ತು ಜಲವಿದ್ಯುತ್‌ ಸೌಲಭ್ಯವನ್ನು ಒದಗಿಸುವ ಯೋಜನೆ ಇದಾಗಿದೆ. ಬುಧವಾರ ಮಧ್ಯಪ್ರದೇಶದ ಖಜುರಾಹೋಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಮಧ್ಯಪ್ರದೇಶದ ಬುಂದೇಲ್‌ಖಂಡದ ಭವಿಷ್ಯವನ್ನು ಬದಲಿಸಲಿದೆ ಎಂದು ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.

44605 ಕೋಟಿ ರೂ. ಮೌಲ್ಯದ ಯೋಜನೆ:
ಕೆನ್‌ ಬೆತ್ವಾ ನದಿ ಯೋಜನೆಗೆ ಸಂಬಂಧಿಸಿದಂತೆ 2021ರಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಕೇಂದ್ರ ಸರ್ಕಾರಗಳು ಒಪ್ಪಂದ ಮಾಡಿಕೊಂಡಿದ್ದವು. ಇದಕ್ಕಾಗಿ ಒಟ್ಟು 44,605 ಕೋಟಿ ರೂ. ವೆಚ್ಚ ಮಾಡಲು ಕೇಂದ್ರ ಸಚಿವ ಸಂಪುಟ ಕಳೆದ ವರ್ಷ ಒಪ್ಪಿಗೆ ನೀಡಿತ್ತು.

ಈ ನದಿ ಜೋಡಣೆ ಯೋಜನೆಯ ಬಳಿಕ ಮಧ್ಯಪ್ರದೇಶದಲ್ಲಿ 8.11ಲಕ್ಷ ಹೆಕ್ಟೇರ್‌ ಮತ್ತು ಉತ್ತರ ಪ್ರದೇಶದ 59,000 ಹೆಕ್ಟೇರ್‌ ಪ್ರದೇಶಗಳು ನೀರಾವರಿ ಸೌಲಭ್ಯ ಪಡೆದುಕೊಳ್ಳಲಿವೆ.

Advertisement

ಮಧ್ಯಪ್ರದೇಶದ 10 ಜಿಲ್ಲೆಗಳ 44 ಲಕ್ಷ ಮಂದಿ ಹಾಗೂ ಉತ್ತರ ಪ್ರದೇಶದ 21 ಲಕ್ಷ ಮಂದಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ. ಅಲ್ಲದೇ ಈ ಯೋಜನೆಯಿಂದ 103 ಮೆ.ವ್ಯಾ. ಜಲವಿದ್ಯುತ್‌ ಹಾಗೂ 27 ಮೆ.ವ್ಯಾ. ಸೌರವಿದ್ಯುತ್‌ ತಯಾರಿಸಲಾಗುತ್ತದೆ.

ಏನಿದು ಕೆನ್‌ ಬೆತ್ವಾ ಯೋಜನೆ?
ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಕೆನ್‌ ನದಿಯಿಂದ ಉತ್ತರ ಪ್ರದೇಶದಲ್ಲಿರುವ ಬೆತ್ವಾ ನದಿಯನ್ನು ಜೋಡಣೆ ಮಾಡುವ ಯೋಜನೆ ಇದಾಗಿದೆ. ಇದಕ್ಕಾಗಿ ಪನ್ನಾದಲ್ಲಿ ಕೆನ್‌ ನದಿಗೆ 77 ಮೀ. ಎತ್ತರ ಹಾಗೂ 2.13 ಕಿ.ಮೀ. ಉದ್ದದ ಅಣೆಕಟ್ಟನ್ನು ನಿರ್ಮಾಣ ಮಾಡಲಾಗುತ್ತದೆ. ಬಳಿಕ 221 ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಮಾಡುವ ಮೂಲಕ ಬೆತ್ವಾ ನದಿಗೆ ನೀರನ್ನು ಹರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next