ಕೆವಾಡಿಯಾ: “ಕೆಲವರು ಎಸಿ ತಾಪಮಾನವನ್ನು 17 ಅಥವಾ 18 ಡಿ.ಸೆ.ನಲ್ಲಿಟ್ಟು, ಹೊದಿಕೆ ಹೊದ್ದುಕೊಂಡು ಮಲಗುತ್ತಾರೆ. ಲೀಟರ್ ಇಂಧನದಲ್ಲಿ 5 ಕಿ.ಮೀ. ದೂರಕ್ಕೆ ಹೋಗುವಂಥ ಕಾರಿನಲ್ಲಿ ಜಿಮ್‌ಗೆ ಹೋಗುತ್ತಾರೆ. ಇಂಥ ಅಭ್ಯಾಸವನ್ನು ತ್ಯಜಿಸಿದರೆ, ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು.’
ಹೀಗೆಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ. ಹವಾಮಾನ ವೈಪರೀತ್ಯದ ಭೀಕರ ಪರಿಣಾಮಗಳಿಂದ ಭೂಮಿಯನ್ನು ರಕ್ಷಿಸುವ ಉದ್ದೇಶದಿಂದ ರೂಪಿಸಲಾದ ಜಾಗತಿಕ ಕಾರ್ಯಯೋಜನೆ “ಮಿಷನ್ ಲೈಫ್’ಗೆ ಗುರುವಾರ ಪ್ರಧಾನಿ ಮೋದಿ ಹಾಗೂ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, “ಎಸಿ ತಾಪಮಾನದ ಬಳಕೆಯಲ್ಲಿ ವಿವೇಚನೆ, ಜಿಮ್‌ಗೆ ಕಾರಿನ ಬದಲು ಸೈಕಲ್ ಬಳಕೆ, “ರೆಡ್ನೂಸ್, ರೀಯೂಸ್, ರೀಸೈಕಲ್’ ಮಂತ್ರದ ಪಾಲನೆ ಮುಂತಾದ ಕ್ರಮಗಳಿಂದ ಭೂಮಿಯನ್ನು ಅಪಾಯದಿಂದ ರಕ್ಷಿಸಲು ಸಾಧ್ಯ’ ಎಂದರು.
“ಪರಿಸರಕ್ಕಾಗಿ ಜೀವನಶೈಲಿ’ ಎಂಬುದು ಮಿಷನ್ ಲೈಫ್ನ ಮಂತ್ರವಾಗಿದೆ. ಪರಿಸರವನ್ನು ಸಂರಕ್ಷಿಸಲು ನಾವೆಲ್ಲರೂ ದೈನಂದಿನ ಬದುಕಿನಲ್ಲಿ ಏನೆಲ್ಲ ಮಾಡಬಹುದೋ ಅದನ್ನು ಮಾಡುವಂತೆ ಮಿಷನ್ ಲೈಫ್ ಉತ್ತೇಜನ ನೀಡುತ್ತದೆ. ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡುವ ಮೂಲಕ ಪರಿಸರವನ್ನು ರಕ್ಷಿಸಲು ಸಾಧ್ಯ ಎನ್ನುವುದು ಈ ಯೋಜನೆಯ ನಂಬಿಕೆಯಾಗಿದೆ ಎಂದು ಹೇಳಿದ ಮೋದಿ, ಇದಕ್ಕೆ ಭಾರತದಲ್ಲಿ ಎಲ್‌ಇಡಿ ಬಲ್ಬ್ಗಳ ಬಳಕೆಯನ್ನು ಉದಾಹರಣೆಯಾಗಿ ನೀಡಿದರು. ಬಹುತೇಕ ಮಂದಿ ಎಲ್‌ಇಡಿ ಬಲ್ಬ್ ಬಳಕೆ ಮಾಡುವ ಮೂಲಕ, ವಿದ್ಯುತ್ಛಕ್ತಿ ಬಿಲ್ ಕೂಡ ಕಡಿಮೆಯಾಯಿತು, ಪರಿಸರವೂ ಉಳಿಯಿತು ಎಂದು ಹೇಳಿದರು.
ಚೀನಾ ವಿರುದ್ಧ ಗುಟೆಸರ್ ಗರಂ:
ಪಾಕ್ ಮೂಲದ ಲಷ್ಕರ್ ಉಗ್ರ ಶಹೀದ್ ಮಹ್ಮೂದ್‌ನನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡುವುದಕ್ಕೆ ಅಡ್ಡಗಾಲು ಹಾಕಿದ ಚೀನಾದ ವಿರುದ್ಧ ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಷನ್ ಲೈಫ್ ಉದ್ಘಾಟನೆ ಬಳಿಕ ಮಾತನಾಡಿದ ಅವರು, “ಭೌಗೋಳಿಕ ರಾಜಕೀಯ ವಿಭಜನೆಯು ಭಯೋತ್ಪಾದನೆಯ ವಿರುದ್ಧ ನಮ್ಮ ಹೋರಾಟಕ್ಕೆ ತೊಂದರೆ ಉಂಟುಮಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.