Advertisement
2007ರಲ್ಲಿ ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಶಿವಮೊಗ್ಗದ ಅಭಿವೃದ್ಧಿಗೆ ಹಲವು ಯೋಜನೆ ತಂದಿದ್ದರು. ವಿಮಾನ ನಿಲ್ದಾಣ ಮಾಡಿದರೆ ಕೈಗಾರಿಕೆ, ಪ್ರವಾಸೋದ್ಯಕ್ಕೆ ಉತ್ತೇಜನ ಸಿಗಲಿದೆ ಎಂದು ಚಿಂತನೆ ನಡೆಸಿ ಸೂಕ್ತ ಜಮೀನನ್ನು ಹುಡುಕಿದರು. ಸೋಗಾನೆ ಸಮೀಪದ 609.30 ಎಕರೆ ಸರಕಾರಿ, 169.39 ಎಕರೆ ಖಾಸಗಿ ಜಾಗದಲ್ಲಿ ಕಿರು ವಿಮಾನ ನಿಲ್ದಾಣ ಮಾಡಲು ಅನುಮೋದನೆ ನೀಡಲಾಗಿತ್ತು. ಟೆಂಡರ್ ಪಡೆದ ಗುತ್ತಿಗೆದಾರ ಅರೆಬೆರೆ ಕೆಲಸ ಮಾಡಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. 2015ರಲ್ಲಿ ಪಿಪಿಪಿ ಮಾದರಿಯಲ್ಲಿ ಮತ್ತೆ ಅನುಮೋದನೆ ನೀಡಲಾಗಿತ್ತು. 2018 ನವೆಂಬರ್‌ನಲ್ಲಿ ಸಮ್ಮಿಶ್ರ ಸರಕಾರದ ಆಡಳಿತವಿದ್ದಾಗ ವಿಮಾನ ನಿಲ್ದಾಣಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಯಾವುದೇ ಪ್ರಗತಿ ಕಾಣಲಿಲ್ಲ. 2019ರಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ, ಅದೇ ವರ್ಷದ ನವೆಂಬರ್‌ನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕಿರು ವಿಮಾನ ನಿಲ್ದಾಣ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಿತು. ಡಿಸೆಂಬರ್‌ನಲ್ಲಿ ಎಟಿಆರ್-72 ಮಾದರಿಯ 2050 ಮೀಟರ್ ಉದ್ದದ ರನ್‌ವೇ ಹಾಗೂ ಭವಿಷ್ಯದಲ್ಲಿ 3050 ಮೀಟರ್ ರನ್‌ವೇಗೆ ವಿಸ್ತರಿಸಲು ಅನುಕೂಲವಾಗುವಂತೆ ಕಾಮಗಾರಿಗೆ ಅನುಮೋದನೆ ನೀಡಲಾಯಿತು. ಅಲ್ಲಿಂದ ಆರಂಭವಾದ ಕಾಮಗಾರಿ ಶರವೇಗದಲ್ಲಿ ಪೂರ್ಣಗೊಂಡು ಸೋಮವಾರ ಉದ್ಘಾಟನೆಯಾಗುತ್ತಿದೆ.
ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ದೊಡ್ಡ ಹೋರಾಟ, ಅಭಿಯಾನಗಳೇ ನಡೆದುಹೋದವು. ರಾಜ್ಯ ಸರ್ಕಾರ ಬಿಎಸ್‌ವೈ ಹೆಸರಿಡಲು ಸಂಪುಟದಲ್ಲಿ ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಲು ತೀರ್ಮಾನ ಮಾಡಿತು. ಆದರೆ ದೊಡ್ಡತನ ಮೆರೆದ ಯಡಿಯೂರಪ್ಪ ನನ್ನ ಹೆಸರು ಬೇಡ, ಸಾಧನೆ ಮಾಡಿದ ಇತರೆ ಮಹನೀಯರ ಹೆಸರಿಡಿ ಎಂದು ಸರ್ಕಾರಕ್ಕೆ ಪತ್ರ ಬರೆದರು. ಕುವೆಂಪು, ಕೆಳದಿ ಶಿವಪ್ಪ ನಾಯಕ, ರಾಣಿ ಅಬ್ಬಕ್ಕ, ಕೆಳದಿ ಚನ್ನಮ್ಮ, ಅಕ್ಕಮಹಾದೇವಿ, ಬಸವಣ್ಣ, ಅಂಬೇಡ್ಕರ್ ಅನೇಕ ಹೆಸರುಗಳು ಶಿಫಾರಸುಗೊಂಡವು. ಈಚೆಗೆ ಸಿಎಂ ಮತ್ತೆ ಬಿಎಸ್‌ವೈ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದ್ದರು. ಎಲ್ಲದ್ದಕ್ಕೂ ತೆರೆ ಎಳೆದ ಯಡಿಯೂರಪ್ಪ ತಾವೇ ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರು ಹೆಸರು ಶಿಫಾರಸು ಮಾಡಿದರು. ಸರ್ಕಾರ ಸಂಪುಟದಲ್ಲಿ ಅನುಮೋದನೆ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಕೆಲವೇ ದಿನಗಳಲ್ಲಿ ಕೇಂದ್ರದಿಂದ ಆದೇಶ ಹೊರಬೀಳುವ ಸಾಧ್ಯತೆ ಇದೆ.
Related Articles
ಶಿವಮೊಗ್ಗ ವಿಮಾನ ನಿಲ್ದಾಣವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ವಿಮಾನ ನಿಲ್ದಾಣಕ್ಕೆ ಸರ್ಕಾರಿ ಭೂಮಿ ಸಿಕ್ಕಿದ್ದರಿಂದ ಭೂಸ್ವಾಧೀನ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಿದೆ. ವಿಮಾನ ನಿಲ್ದಾಣದ ಕಟ್ಟಡ, ರನ್‌ವೇ, ಕಾಂಪೌಂಡ್, ಇತರೆ ಕಾಮಗಾರಿಗಳಿಗೆ 449.22 ಕೋಟಿ ರೂ. ಖರ್ಚಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಆಗಿದ್ದು ಲೈಸೆನ್ಸ್. ಈವರೆಗೆ ನಿರ್ಮಾಣವಾಗಿರುವ ಎಲ್ಲ ವಿಮಾನ ನಿಲ್ದಾಣಗಳು ಲೈಸೆನ್ಸ್ ಪಡೆಯಲು ಉದ್ಘಾಟನೆ ದಿನದಿಂದ ಕನಿಷ್ಠ ಆರು ತಿಂಗಳು ತೆಗೆದುಕೊಂಡಿವೆ.
Advertisement
ಶಿವಮೊಗ್ಗ ವಿಮಾನ ನಿಲ್ದಾಣ ಮಾತ್ರ ಲೈಸೆನ್ಸ್ ಪ್ರಕ್ರಿಯೆ ಪೂರ್ಣಗೊಳಿಸಿಯೇ ಉದ್ಘಾಟನೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸಂಸದ ರಾಘವೇಂದ್ರರ ಪರಿಶ್ರಮ. ಲೈಸೆನ್ಸ್ ನೀಡುವ ಡೈರಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅವರನ್ನು ಕಾಮಗಾರಿ ನಡುವೆ ಕರೆಸಿ ಸಲಹೆ ಪಡೆಯಲಾಗಿತ್ತು. ಅವರ ಶಿಫಾರಸುಗಳ ಆಧಾರದ ಮೇಲೆ ಕಾಮಗಾರಿ ನಡೆಸಲಾಗಿತ್ತು. ಫೆಬ್ರವರಿ ಮೊದಲ ವಾರದಲ್ಲಿ ಬಂದಿದ್ದ ಈ ತಂಡ 75 ತಕರಾರುಗಳನ್ನು ನೋಟಿಸ್ ಮಾಡಿತ್ತು. ವಾರದೊಳಗೆ ಅದನ್ನು ಪೂರ್ಣಗೊಳಿಸಿ ಲೈಸೆನ್ಸ್ ಪಡೆಯಲಾಗಿದೆ.
ಪ್ರಧಾನಿ ವಿಮಾನ ಇಳಿಯಲು ಗ್ರೀನ್ ಸಿಗ್ನಲ್ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನವು ಇದೇ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿರುವುದು ಮತ್ತೊಂದು ದಾಖಲೆ. ಲೈಸೆನ್ಸ್ ಪ್ರಕ್ರಿಯೆ ತಡವಾಗಿದ್ದರೆ ಪ್ರಧಾನಿ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸುವ ಸಾಧ್ಯತೆ ಇತ್ತು. ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿಎಸ್‌ವೈ ಆಶಯದಂತೆ ಲೈಸೆನ್ಸ್ ಸಿಕ್ಕಿದ್ದು ಪ್ರಧಾನಿಯವರ ವಿಮಾನ ಇಲ್ಲೇ ಲ್ಯಾಂಡ್ ಆಗಲಿದೆ. ಈಗಾಗಲೇ ವಾಯುಪಡೆಯ ಎರಡು ವಿಮಾನಗಳು ಬಂದು ಪ್ರಯೋಗಾರ್ಥ ಹಾರಾಟ ನಡೆಸಿದ್ದು, ಪ್ರಧಾನಿ ವಿಮಾನ ಇಳಿಯಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ವಿಮಾನ ನಿಲ್ದಾಣ ವಿಶೇಷತೆ
ರಾತ್ರಿ ಕಾರ್ಯಾಚರಣೆ, ಸಣ್ಣ ವಿಮಾನಗಳಿಂದ ಏರ್‌ಬಸ್‌ವರೆಗೆ ಎಲ್ಲ ರೀತಿಯ ವಿಮಾನಗಳು ಇಲ್ಲಿ ಲ್ಯಾಂಡ್ ಆಗಬಹುದು. ಮಲೆನಾಡು, ಮಧ್ಯ ಕರ್ನಾಟಕದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯ ಇದು ಕೈಗಾರಿಕೆ, ಮಲೆನಾಡು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಪ್ರಸ್ತುತ ಶಿವಮೊಗ್ಗ-ಬೆಂಗಳೂರು ಮಾರ್ಗಕ್ಕೆ ಸ್ಟಾರ್
ಏರ್ ವೇಸ್ ಮುಂದೆ ಬಂದಿದೆ. ವಿಶೇಷ ವಿನ್ಯಾಸ
ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ವಿನ್ಯಾಸವು ಅರಳಿದ ಕಮಲದ ಆಕಾರದಲ್ಲಿದ್ದು ಆಕಾಶದಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಕಮಲ ಆಕಾರದ ಬಗ್ಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ತಾಂತ್ರಿಕವಾಗಿ ಇದು ಕಾರ್ಯಸಾಧುವೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೆ ಅಂದುಕೊಂಡಿದ್ದಕ್ಕಿಂತ ಉತ್ತಮವಾಗಿ ಟರ್ಮಿನಲ್ ಮೂಡಿಬಂದಿದೆ. ನಿವೇಶನ ಪರಿಹಾರ
ವಿಮಾನ ನಿಲ್ದಾಣಕ್ಕೆ ಜಾಗ ಕೊಟ್ಟವರಿಗೆ ನಿವೇಶನ ಕೊಡುವ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಿರುವ ಬಿಎಸ್‌ವೈ ಪ್ರತಿ ಕುಟುಂಬಕ್ಕೆ ಒಂದು ನಿವೇಶನ ಕೊಡಲು ಸಿದ್ಧತೆ ನಡೆಸಿದ್ದಾರೆ. ಕೆಎಚ್‌ಬಿ ವತಿಯಿಂದ ಊರಗಡೂರು ಬಳಿ ಅಭಿವೃದ್ಧಿಪಡಿಸಿರುವ ಲೇಔಟ್‌ನ ಸೈಟುಗಳನ್ನು ಕೊಡಲು ಸರ್ಕಾರದ ಜತೆ ಪತ್ರ ವ್ಯವಹಾರ ನಡೆಸಲಾಗಿದೆ. ಲೇಔಟ್ ನಿರ್ಮಾಣ ವೆಚ್ಚ 36 ಕೋಟಿಯನ್ನು ಸರ್ಕಾರವೇ ಭರಿಸಿ ನಿವೇಶನ ಕೊಡಲು ಸಿದ್ಧತೆ ನಡೆದಿದೆ. -ಶರತ್ ಭದ್ರಾವತಿ