ಉತ್ತರ ಪ್ರದೇಶ: ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತದಡಿ ಕಲ್ಪಿಸಲಾಗಿರುವ ಸೌಕರ್ಯಗಳನ್ನು ಲೋಕಾರ್ಪಣೆ ಮಾಡಿದ ನಂತರ, ಪ್ರಧಾನಿ ನರೇಂದ್ರ ಮೋದಿಯವರು, ಮೊದಲ ಹಂತದ ಯೋಜನೆಯಲ್ಲಿ ದುಡಿದ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದರು.
ಉದ್ಘಾಟನಾ ಸ್ಥಳದಲ್ಲಿನ ಮೆಟ್ಟಿಲುಗಳ ಮೇಲೆ ಸಾಲಾಗಿ ಕುಳಿತಿದ್ದ ಕಾರ್ಮಿಕರ ಬಳಿಗೆ ಕೈಯಲ್ಲಿ ಸೇವಂತಿಗೆ ಹೂವುಗಳ ದಳಗಳಿರುವ ದೊಡ್ಡ ಬಟ್ಟಲನ್ನು ಹಿಡಿದು ಖುದ್ದಾಗಿ ತೆರಳಿದ ಮೋದಿ, ಆ ದಳಗಳನ್ನು ಕಟ್ಟಡ ಕಾರ್ಮಿಕರ ಮೇಲೆ ಎರಚಿದರು. ಎತ್ತರದ ಮೆಟ್ಟಿಲುಗಳ ಮೇಲಿದ್ದ ಕಾರ್ಮಿಕರ ಬಳಿಯವರೆಗೆ ತೆರಳಿ, ಅವರ ತಲೆಯ ಮೇಲೂ ಹೂ ದಳಗಳನ್ನು ಸುರಿಸಿ ಶುಭ ಹಾರೈಸಿದರು.
ಆನಂತರ ಮಾತನಾಡಿದ ಅವರು, “ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತದ ಕಾಮಗಾರಿಗಾಗಿ ತಮ್ಮ ಬೆವರನ್ನು ಸುರಿಸಿದ ಎಲ್ಲಾ ಕಾರ್ಮಿಕ ಅಣ್ಣ ತಂಗಿಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಕೊರೊನಾ ಲಾಕ್‌ಡೌನ್‌ನಂಥ ಕಷ್ಟಕರ ಸಂದರ್ಭದಲ್ಲೂ ಅವರ ಶ್ರಮವಹಿಸಿ ದುಡಿಯುವ ಮೂಲಕ ಈ ಯೋಜನೆಯ ಮೊದಲ ಹಂತದ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಹಕರಿಸಿದ್ದಾರೆ. ಈಗಷ್ಟೇ ಅವರನ್ನು ಭೇಟಿ ಮಾಡುವ ಅಪೂರ್ವ ಅವಕಾಶವನ್ನು ಪಡೆದ ನಾನು ಅವರೊಂದಿಗೆ ಸಂವಾದ ನಡೆಸಿ, ಅವರ ಆಶೀರ್ವಾದವನ್ನು ಪಡೆದಿದ್ದೇನೆ” ಎಂದು ತಿಳಿಸಿದರು.
ಇದನ್ನೂ ಓದಿ:ಗೋವಾದಲ್ಲಿ ಟಿಎಂಸಿ ಗೆದ್ದರೆ, ಬಂಗಾಳದಂತೆ ವಿವಿಧ ಯೋಜನೆಗಳ ಜಾರಿ: ಮಮತಾ ಬ್ಯಾನರ್ಜಿ ಭರವಸೆ
ಇದೇ ವೇಳೆ, “ಕಾಮಗಾರಿಗಾಗಿ ದುಡಿದ ಸಿವಿಲ್ ಇಂಜಿನಿಯರ್‌ಗಳು, ಕಲಾವಿದರು, ವಾರಾಣಸಿ ಜಿಲ್ಲಾಡಳಿತದ ಅಧಿಕಾರಿಗಳು, ಕಾರಿಡಾರ್ ಯೋಜನೆಗಾಗಿ ತಾವಿದ್ದ ಮನೆಗಳನ್ನೇ ಬಿಟ್ಟುಕೊಟ್ಟಿರುವ ವಾರಾಣಸಿಯ ನಿವಾಸಿಗಳಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಅತ್ಯಂದ ಶ್ರದ್ಧೆಯಿಂದ ಈ ಯೋಜನೆಯನ್ನು ಮುಗಿಸಿರುವುದೆ. ಹಾಗಾಗಿ, ಅವರ ಸರ್ಕಾರಕ್ಕೂ ನಾನು ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ” ಎಂದು ಮೋದಿ ಹೇಳಿದರು.