ಹೊಸದಿಲ್ಲಿ: ಭಾರತದ ಅತೀ ಉದ್ದದ ಹೆದ್ದಾರಿ ಎಂಬ ಖ್ಯಾತಿಗೆ ಪಾತ್ರವಾಗಲಿರುವ ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇಯ
ಸೋಹ್ನಾ -ದೌಸಾ ಮಾರ್ಗವನ್ನು ರವಿವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ರಾಜಸ್ಥಾನದ ದೌಸಾದಲ್ಲಿ ಮೋದಿ ಅವರು ಈ ಮಾರ್ಗದ ಉದ್ಘಾಟನೆ ನೆರವೇರಿಸಲಿದ್ದು, ಮಂಗಳವಾರದಿಂದಲೇ ಮಾರ್ಗವು ಪ್ರಯಾಣಿಕರಿಗೆ ಮುಕ್ತವಾಗಲಿದೆ.
1,380 ಕಿ.ಮೀ. ಉದ್ದದ ಎಕ್ಸ್ ಪ್ರಸ್ ಹೆದ್ದಾರಿಯ
ಸೋಹ್ನಾ-ದೌಸಾ ಮಾರ್ಗವು ಪ್ರಯಾಣಿಕರು ಮತ್ತು ವಾಣಿಜ್ಯ ವಾಹನಗಳಿಗೆ ಪರ್ಯಾಯ ಹೆದ್ದಾರಿಯೊಂದನ್ನು ಕಲ್ಪಿಸಿಕೊಡಲಿದೆ.
ಇದರಿಂದಾಗಿ ಪ್ರಸ್ತುತ ದಿಲ್ಲಿ-ಜೈಪುರ ಎಕ್ಸ್‌ಪ್ರೆಸ್‌ವೇಯನ್ನು ಅವಲಂಬಿಸಿದ್ದ ಜನರಿಗೆ ದಟ್ಟಣೆಯ ಕಿರಿಕಿರಿ ಇಲ್ಲದೇ ಪ್ರಯಾಣಿಸಲು ಸಾಧ್ಯವಾಗಲಿದೆ. ಈ ಮಾರ್ಗದಿಂದ ದಿಲ್ಲಿ ಮತ್ತು ಜೈಪುರದ ನಡುವಿನ ಪ್ರಯಾಣದ ಅವಧಿ ಈಗಿರುವ 5 ಗಂಟೆಗಳಿಂದ 2.5-3 ಗಂಟೆಗಳಿಗೆ ಇಳಿಯಲಿದೆ.
ಇದು ಅಷ್ಟಪಥ ಹೆದ್ದಾರಿಯಾಗಿದ್ದು, ಮುಂಬರುವ ದಿನಗಳಲ್ಲಿ 12 ಪಥಗಳಿಗೆ ವಿಸ್ತರಿಸಲೂ ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿಲ್ಲಿ-ಮುಂಬಯಿ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪೂರ್ಣಗೊಂಡರೆ, ವಾರ್ಷಿಕ 320 ದಶಲಕ್ಷ ಲೀಟರ್‌ಗೂ ಅಧಿಕ ಇಂಧನ ಉಳಿತಾಯವಾಗಲಿದೆ ಮತ್ತು ಇಂಗಾಲದ ಹೊರಸೂಸುವಿಕೆ 850 ದಶಲಕ್ಷ ಕೆಜಿಯಷ್ಟು ಕಡಿಮೆಯಾಗಲಿದೆ ಎಂದಿದ್ದಾರೆ.