ತ್ರಿಶ್ಶೂರ್: ಮಾಲಿವುಡ್ ಖ್ಯಾತ ನಟ , ಮಾಜಿ ಸಂಸದ ಸುರೇಶ್ ಗೋಪಿ ಅವರ ಪುತ್ರಿಯ ವಿವಾಹ ಸಮಾರಂಭ ಜನವರಿ 17ರಂದು ಗುರುವಾಯೂರ್ ನಲ್ಲಿ ನಡೆಯಲಿದ್ದು, ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಇದನ್ನೂ ಓದಿ:Ayodhya; ರಾಮಮಂದಿರ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ, ಖರ್ಗೆ ಸೇರಿ ಪ್ರಮುಖ ನಾಯಕರು ಗೈರು
ಇದಕ್ಕೂ ಮುನ್ನ ತ್ರಿಶ್ಶೂರ್ ಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಇದೀಗ ಜ.17ರಂದು ಎರಡನೇ ಬಾರಿ ಭೇಟಿ ನೀಡುತ್ತಿರುವುದಾಗಿ ವರದಿ ವಿವರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾಯೂರು ದೇವಾಲಯಕ್ಕೆ ಭೇಟಿ ನೀಡಿದ ನಂತರ ವಿವಾಹ ಮಂಟಕ್ಕೆ ಆಗಮಿಸಲಿದ್ದು, ಬಳಿಕ ಅವರು ಕೊಚ್ಚಿಗೆ ತೆರಳಲಿದ್ದಾರೆ ಎಂದು ವರದಿ ವಿವರಿಸಿದೆ.
ಪ್ರಧಾನಿ ಅವರ ಭೇಟಿಯ ಹಿನ್ನೆಲೆಯಲ್ಲಿ ಈಗಾಗಲೇ ದೇವಸ್ಥಾನ ಹಾಗೂ ಸುತ್ತಮುತ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು, ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸುರೇಶ್ ಗೋಪಿ ಪುತ್ರಿ ಭಾಗ್ಯ ಉದ್ಯಮಿ ಶ್ರೇಯಸ್ ಮೋಹನ್ ಅವರನ್ನು ಜನವರಿ 17ರಂದು ಗುರುವಾಯೂರು ದೇವಸ್ಥಾನದಲ್ಲಿ ವರಿಸಲಿದ್ದಾರೆ. ಜನವರಿ 20ರಂದು ತಿರುವನಂತಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ರಿಸೆಪ್ಶನ್ ಸಮಾರಂಭ ನಡೆಯಲಿದೆ ಎಂದು ವರದಿ ತಿಳಿಸಿದೆ.
ಇತ್ತೀಚೆಗೆ ಸುರೇಶ್ ಗೋಪಿ, ಪತ್ನಿ ಹಾಗೂ ಪುತ್ರಿ ದೆಹಲಿಗೆ ತೆರಳಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೋಪಿ ಅವರನ್ನು ತ್ರಿಶ್ಶೂರ್ ನಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ಹೇಳಿದೆ.