Advertisement

ಬಾಲಿಯಲ್ಲಿ ವಿಶ್ವಶಾಂತಿಯ ಸಂದೇಶ ಮೊಳಗಲಿ

11:57 PM Nov 13, 2022 | Team Udayavani |

ಒಂದು ಕಡೆ ಉಕ್ರೇನ್‌ ಮೇಲಿನ ರಷ್ಯಾ ದಾಳಿ, ಮತ್ತೊಂದು ಕಡೆ ಉತ್ತರ ಕೊರಿಯಾದ ಕ್ಷಿಪಣಿಗಳ ಹಾರಾಟ, ಮಗದೊಂದು ಕಡೆ ಥೈವಾನ್‌ ಮೇಲೆ ಯುದ್ಧಕ್ಕೆ ಸನ್ನದ್ಧರಾಗಿರುವಂತೆ ಚೀನ ಅಧ್ಯಕ್ಷರು ನೀಡಿರುವ ಕರೆ; ಈ ಎಲ್ಲ ವಿಶ್ವಶಾಂತಿಗೆ ಭಂಗ ತರುವಂಥ ಬೆಳವಣಿಗೆಗಳ ನಡುವೆಯೇ ಇಂಡೋನೇಷ್ಯಾದ ಬಾಲಿಯಲ್ಲಿ 17ನೇ ಜಿ20 ಶೃಂಗಸಭೆ ನಡೆಯಲಿದ್ದು, ಜಗತ್ತಿನ ಬಹುತೇಕ ಅಗ್ರ ನಾಯಕರು ಇದರಲ್ಲಿ ಭಾಗಿಯಾಗುತ್ತಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿಯವರೂ ಸೋಮವಾರ ಬೆಳಗ್ಗೆ ಮೂರು ದಿನಗಳ ಭೇಟಿಗಾಗಿ ಇಂಡೋನೇಷ್ಯಾಕ್ಕೆ ತೆರಳಲಿದ್ದಾರೆ. ಈ ಬಾರಿಯ ಜಿ20 ಶೃಂಗಸಭೆ ವಿಶೇಷ ಕಾರಣಕ್ಕಾಗಿ ಭಾರತೀಯರ ಮಟ್ಟಿಗೆ ಸುದ್ದಿಯಲ್ಲಿದೆ. ಮುಂದಿನ ಜಿ20 ಶೃಂಗಸಭೆಗೆ ಭಾರತವೇ ನೇತೃತ್ವ ವಹಿಸಲಿದ್ದು, ಇದರ ನಾಯಕತ್ವ ಇಂಡೋನೇಷ್ಯಾ ಕಡೆಯಿಂದ ಭಾರತಕ್ಕೆ ಅಧಿಕೃತವಾಗಿ ವರ್ಗಾವಣೆಯಾಗಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಜಪಾನ್‌, ದಕ್ಷಿಣ ಕೊರಿಯಾ, ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಮೆಕ್ಸಿಕೋ, ಸೌದಿ ಅರೇಬಿಯಾ, ಟರ್ಕಿ, ಐರೋಪ್ಯ ಒಕ್ಕೂಟದ ನಾಯಕರು ಬಾಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್‌ ರೂಪಾಂತರ ಹಾಗೂ ಆರೋಗ್ಯ ವಿಷಯದ ಕುರಿತ ಮೂರು ಪ್ರಮುಖ ಸಂಕಿರಣಗಳಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಭಾರತ ಸಾಧಿಸಿರುವ ಸಾಧನೆಗಳ ಕುರಿತಂತೆ ವಿವರಗಳನ್ನು ಬಿಚ್ಚಿಡಲಿದ್ದಾರೆ.

ಮೋದಿಯವರ ಕಾರ್ಯಕ್ರಮ ಪಟ್ಟಿಯಲ್ಲಿ ಯಾವೆಲ್ಲ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಉಲ್ಲೇಖಿಸಿಲ್ಲವಾದರೂ ಸೈಡ್‌ಲೈನ್‌ನಲ್ಲಿ ಪ್ರಮುಖ ಜಾಗತಿಕ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಈ ಬಾರಿಯ ಜಿ20 ಶೃಂಗಸಭೆ ಮೇಲೆ ಇಡೀ ಜಗತ್ತೇ ಗಮನಹರಿಸಿದೆ. ಇದು ಶ್ರೀಮಂತ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಗುಂಪಾಗಿದ್ದು, ಪ್ರಮುಖ ದೇಶಗಳೆಲ್ಲ ಭಾಗಿಯಾಗುವುದರಿಂದ ಮಹತ್ವದ ನಿರ್ಣಯಗಳು ಹೊರಬೀಳುವ ಬಗ್ಗೆ ನಿರೀಕ್ಷೆ ಇಡಲಾಗಿದೆ.

ಅಂದರೆ ಉಕ್ರೇನ್‌ ಮೇಲಿನ ರಷ್ಯಾ ದಾಳಿಯಿಂದಾಗಿ ಜಗತ್ತಿನ ಅರ್ಥ ವ್ಯವಸ್ಥೆ ಏರುಪೇರಾಗಿದೆ. ಇನ್ನು ಉತ್ತರ ಕೊರಿಯಾ, ಜಪಾನ್‌ ಮತ್ತು ದಕ್ಷಿಣ ಕೊರಿಯಾದ ಕಡಲ ಪರಿಧಿಯೊಳಗೆ ಕ್ಷಿಪಣಿಗಳನ್ನು ಹಾರಿಸಿ, ಆಂತರಿಕ ಭದ್ರತೆಗೆ ಆತಂಕವನ್ನುಂಟು ಮಾಡುತ್ತಿದೆ. ಇದರ ಮಧ್ಯೆಯೇ ಚೀನದ ಅಧ್ಯಕ್ಷ ಜಿನ್‌ಪಿಂಗ್‌, ತಮ್ಮ ಸೈನಿಕರಿಗೆ ಯುದ್ಧಕ್ಕೆ ಸನ್ನದ್ಧರಾಗುವಂತೆ ಸೂಚಿಸಿದ್ದು, ತೈವಾನ್‌ ಮೇಲೆ ದಾಳಿಗೆ ತಯಾರಿ ನಡೆಸುತ್ತಿದೆ. ಈ ಎಲ್ಲ ಬೆಳವಣಿಗೆಗಳು ಜಾಗತಿಕ ಸಮುದಾಯದಲ್ಲಿ ಒಂದು ರೀತಿಯ ಆತಂಕ ಸೃಷ್ಟಿಸಿರುವುದಂತೂ ನಿಜ.

Advertisement

ಇದನ್ನು ನಡೆಯಬೇಕಾದರೆ ಈ ಸಭೆಯಲ್ಲಿ ಸರಣಿ ಲೆಕ್ಕಾಚಾರದಲ್ಲಿ ಮಾತುಕತೆಗಳಾಗಬೇಕು. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಗುಟೆರಸ್‌ ಅವರೂ ಭಾಗಿಯಾಗಲಿದ್ದು, ಈ ಸಂದರ್ಭದಲ್ಲೇ ವಿಶ್ವಶಾಂತಿ ಬಗ್ಗೆ ಚರ್ಚೆಯಾಗಬೇಕು.

ಯುದ್ಧವೊಂದೇ ಎಲ್ಲದಕ್ಕೂ ಮಾರ್ಗವಲ್ಲ ಎಂಬ ಭಾರತದ ಮಾತು ಜಿ20 ಶೃಂಗದಲ್ಲಿ ರಿಂಗಣಿಸಬೇಕಿದೆ. ರಾಷ್ಟ್ರಗಳ ನಡುವೆ ಇರುವ ಅಹಂಕಾರ ಭಾವನೆಗಳು ಅಳಿದು, ಇನ್ನುಳಿದ ರಾಷ್ಟ್ರಗಳ ಅಖಂಡತೆಗೆ ಗೌರವ ನೀಡಬೇಕಾದ ಅಗತ್ಯತೆಯೂ ಇದೆ. ಈ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳು ಗಮನಹರಿಸಲಿ ಎಂಬುದು ಇಡೀ ಜಗತ್ತಿನ ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next