Advertisement

BJP; ಏಪ್ರಿಲ್ 14 ರಂದು ಪ್ರಧಾನಿ ಮೋದಿ ಮಂಗಳೂರಿಗೆ: ಬೃಹತ್ ಸಭೆ

12:31 AM Apr 09, 2024 | Team Udayavani |

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14 ರಂದು ನಗರಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್ ಸೋಮವಾರ ತಿಳಿಸಿದ್ದಾರೆ.

Advertisement

ಮೋದಿ ಅವರು ಬಂಗ್ರ ಕುಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

ಎ. 14ರಂದು ರಾಜ್ಯದಲ್ಲಿ ಮೋದಿಯವರ ಎರಡು ಚುನಾವಣ ಕಾರ್ಯಕ್ರಮ ನಡೆಸಲು ಪ್ರಧಾನಿ ಕಾರ್ಯಾಲಯದಿಂದ ಸಮಯ ನೀಡಲಾಗಿತ್ತು. ಆದರೆ ಬಹಿರಂಗ ಸಮಾವೇಶವನ್ನು ಮಂಗಳೂರಿನಲ್ಲಿ ನಡೆಸಬೇಕೋ ಅಥವಾ ಚಿಕ್ಕಬಳ್ಳಾಪುರದಲ್ಲಿ ನಡೆಸಬೇಕೋ ಎಂಬುದು ದೃಢಪಟ್ಟಿರಲಿಲ್ಲ. ಅಂತಿಮವಾಗಿ ಮಂಗಳೂರಿನಲ್ಲಿ ಸಭೆ ನಡೆಸಲು ಈಗ ಒಪ್ಪಿಗೆ ಲಭಿಸಿದೆ.

ದಕ್ಷಿಣ ಕನ್ನಡ, ಉಡುಪಿ -ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಮೂರು ಕ್ಷೇತ್ರಗಳನ್ನು ಇದುವರೆಗೆ ಪ್ರತಿನಿಧಿಸುತ್ತಿದ್ದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ ಹಾಗೂ ಅನಂತಕುಮಾರ್‌ ಹೆಗಡೆಯವರನ್ನು ಬದಲಿಸಿ, ಕ್ಯಾ| ಬ್ರಿಜೇಶ್‌ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಈ ಬಾರಿ ಟಿಕೆಟ್‌ ನೀಡಲಾಗಿದೆ.

ಹೀಗಾಗಿ ಹೊಸ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಕೇಸರಿ ಪಾಳಯದಲ್ಲಿ ಉತ್ಸಾಹ ಮೂಡಿಸುವುದಕ್ಕೆ ಈ ಸಮಾವೇಶ ಅವಕಾಶ ನೀಡಲಿದೆ ಎಂದು ಬಿಜೆಪಿ ನಿರೀಕ್ಷೆ ಹೊಂದಿದೆ.

Advertisement

ರೋಡ್‌ ಶೋ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಮೋದಿ ರೋಡ್‌ ಶೋ ನಿಗದಿಯಂತೆ ನಡೆಯಲಿದೆ. ಮೊದಲ ಹಂತದ ಚುನಾವಣೆ ಮುಗಿಯುವುದಕ್ಕೆ ಮುನ್ನ ಇನ್ನೂ ಎರಡು ಬಾರಿ ಮೋದಿ ಕರ್ನಾಟಕದ ಪ್ರಚಾರ ಸಭೆಯಲ್ಲಿ ಭಾಗವಹಿಸಬಹುದೆಂದು ಬಿಜೆಪಿ ಮೂಲಗಳು ತಿಳಿಸಿದ್ದು, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಭಾಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನೊಂದು ಸಭೆ ಹಾಗೂ ರೋಡ್‌ ಶೋ ನಡೆಯುವ ಸಾಧ್ಯತೆ ಇದೆ.

ಎ. 20ರಂದು ಯೋಗಿ ಆಗಮನ?
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಎ. 20ರಂದು ಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ ಇದೆ. ಅವರು ಕರ್ನಾಟಕದ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಇದ್ದು, ಹಳೇ ಮೈಸೂರು ಹಾಗೂ ಕರಾವಳಿ ಭಾಗದಲ್ಲಿ ಅವರ ಪ್ರಚಾರ ಸಭೆ ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ. ಬಿಜೆಪಿ ಮೂಲಗಳ ಪ್ರಕಾರ ಎ. 20ರಂದು ರಾಜ್ಯಕ್ಕೆ ಯೋಗಿ ಆಗಮಿಸಲಿದ್ದಾರೆ. ಎ. 15ರಂದು ವಿದೇಶಾಂಗ ಸಚಿವ ಜೈಶಂಕರ್‌ ಬೆಂಗಳೂರಿಗೆ ಬರಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಕೂಡ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next