Advertisement

Controversy;ಪಿಎಂ ಮೋದಿ ವಿರುದ್ಧ ಕಾಂಗ್ರೆಸ್‌ ಲಕ್ಷ ಸಹಿ ಅಭಿಯಾನ

12:51 AM Apr 23, 2024 | Team Udayavani |

ಹೊಸದಿಲ್ಲಿ: “ನಾವು ಅಧಿಕಾರಕ್ಕೆ ಬಂದರೆ ಹಿಂದೂಗಳ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇವೆ’ ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಘೋಷಿಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಭಾರೀ ವಿವಾದಕ್ಕೆ ನಾಂದಿ ಹಾಡುತ್ತಿದ್ದಂತೆಯೇ, ಮೋದಿ ವಿರುದ್ಧ ದೇಶವ್ಯಾಪಿ ಅಭಿಯಾನ ಕೈಗೊಳ್ಳಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.

Advertisement

ಒಟ್ಟು 1 ಲಕ್ಷ ಸಹಿ ಸಂಗ್ರಹಿಸಿ ಪ್ರಧಾನಿ ಮೋದಿ ವಿರುದ್ಧ ಚುನಾವಣ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ರಾಜಸ್ಥಾನ ಹಾಗೂ ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿ ಮಾಡಿರುವ ಭಾಷಣವು ವಿವಾದದ ಸ್ವರೂಪ ಪಡೆದುಕೊಳ್ಳುತ್ತಲೇ, ಸೋಮವಾರ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ.ವೇಣುಗೋಪಾಲ್‌, “ನಮ್ಮ ಪ್ರಣಾಳಿಕೆಯನ್ನು ಟೀಕಿಸುವ ಭರದಲ್ಲಿ ಪ್ರಧಾನಿ ಮೋದಿಯವರು ಕೋಮುವಾದಿ ಹಾಗೂ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯವರ ಅಪಾಯಿಂಟ್‌ಮೆಂಟ್‌ ಪಡೆದುಕೊಂಡು, ಅವರನ್ನು ಭೇಟಿಯಾಗಿ ಮೋದಿಯವರಿಗೆ ನಮ್ಮ ಪ್ರಣಾಳಿಕೆಯ ಬಗ್ಗೆ “ಅರಿವು’ ಮೂಡಿಸಲಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್‌ ಪ್ರಣಾಳಿಕೆಯ ಪ್ರತಿಗಳನ್ನು ನಮ್ಮೆಲ್ಲ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಪ್ರಧಾನಿ ಮೋದಿಯವರಿಗೆ ರವಾನಿಸಲಿದ್ದಾರೆ’ ಎಂದಿದ್ದಾರೆ. ಒಂದು ಲಕ್ಷ ಜನರ ಸಹಿ ಸಂಗ್ರಹ ಮಾಡಿ, ಮೋದಿ ವಿರುದ್ಧ ಚುನಾವಣ ಆಯೋಗಕ್ಕೆ ದೂರು ನೀಡಲಿದ್ದೇವೆ ಎಂದೂ ತಿಳಿಸಿದ್ದಾರೆ.

“ದೇಶದ ಜನರು ಕಷ್ಟಪಟ್ಟು ದುಡಿದ ಹಣವನ್ನೆಲ್ಲ ಕಾಂಗ್ರೆಸ್‌ ಕಿತ್ತುಕೊಂಡು, ಒಳನುಸುಳುಕೋರರು ಮತ್ತು ಹೆಚ್ಚು ಮಕ್ಕಳಿರುವವರಿಗೆ ನೀಡಲಿದೆ ಎಂಬ ಅತ್ಯಂತ ತುತ್ಛ ಹೇಳಿಕೆಯನ್ನು ಮೋದಿಯವರು ನೀಡಿದ್ದಾರೆ. ಅವರ ಹೇಳಿಕೆಯು ಪ್ರಧಾನಮಂತ್ರಿ ಹುದ್ದೆಗೆ ತಕ್ಕುದಲ್ಲ. ಒಬ್ಬ ಪ್ರಧಾನಿಯಾದವರು ಎಲ್ಲ ವಿಷಯಗಳಲ್ಲೂ ಸುಳ್ಳು ಹೇಳಿಕೊಂಡು, ಫೇಕ್‌ ನ್ಯೂಸ್‌ ಹಬ್ಬಿಸುವುದೆಂದರೆ ಇದಕ್ಕೆ ಅರ್ಥವಿದೆಯೇ? ರಾಜಸ್ಥಾನದಲ್ಲಿ ಮೋದಿಯವರು ಮಾಡಿರುವ ಭಾಷಣವೇ ಇಡೀ ದೇಶದಲ್ಲಿ ಅತೀ ಹೆಚ್ಚು ಸುಳ್ಳು ಹೇಳುವವರು ಯಾರು ಎಂಬದನ್ನು ಸ್ಪಷ್ಟಪಡಿಸಿದೆ’ ಎಂದು ವೇಣುಗೋಪಾಲ್‌ ವಾಗ್ಧಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿರುವುದೇನು?
ಸಂಪತ್ತು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಏನನ್ನು ಉಲ್ಲೇಖ ಮಾಡಿಲ್ಲ. ಆದರೆ ಪಕ್ಷ ಅಧಿಕಾರಕ್ಕೆ ಬಂದರೆ ಸಂಪತ್ತು ಗಳಿಕೆಯಲ್ಲಾಗುವ ಅಸಮಾನತೆಯನ್ನು ಹೋಗಲಾಡಿಸಲು ಅಗತ್ಯವಾದ ನೀತಿಗಳನ್ನು ರೂಪಿಸಲಾಗುತ್ತದೆ ಎಂದು ಹೇಳಿದೆ. ಅಲ್ಲದೇ ಪ್ರಣಾಳಿಕೆಯ ಮೊದಲ ಅಧ್ಯಾಯವಾದ ಸಮಾನತೆ, ದೇಶದಲ್ಲಿರುವ ಜಾತಿ ತಾರತಮ್ಯದ ಬಗ್ಗೆ ಉಲ್ಲೇಖ ಹೊಂದಿದ್ದು, ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯ ದೇಶದ ಜನಸಂಖ್ಯೆ ಶೇ.70ರಷ್ಟಿದ್ದು, ಆದರೆ ಅವರು ಹೊಂದಿರುವ ಸಂಪತ್ತಿನ ಪ್ರಮಾಣ ಕಡಿಮೆ ಎಂದು ಹೇಳಿದೆ.

ಮೋದಿ ವಿರುದ್ಧ ಕಾಂಗ್ರೆಸ್‌ ನಿಯೋಗದಿಂದ ದೂರು
“ಸಂಪತ್ತು ಮರುಹಂಚಿಕೆ’ ಹೇಳಿಕೆಗೆ ಸಂಬಂಧಿಸಿ ಪ್ರಧಾನಿ ಮೋದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳು ವಂತೆ ಕೋರಿ ಕಾಂಗ್ರೆಸ್‌ನ ನಿಯೋಗ ಸೋಮ ವಾರ ಚುನಾವಣ ಆಯೋಗಕ್ಕೆ ಮನವಿ ಸಲ್ಲಿ
ಸಿದೆ. ಮೋದಿಯವರ ಹೇಳಿಕೆ ದುರುದ್ದೇಶಪೂರಿತ, ವಿಭಜನಾತ್ಮಕ ಮತ್ತು ನಿರ್ದಿಷ್ಟ ಸಮುದಾ ಯವನ್ನು ಗುರಿಯಾಗಿಸಿರುವಂಥದ್ದು. ಅವರು ಚುನಾವಣ ನೀತಿ ಸಂಹಿತೆ ಉಲ್ಲಂ ಸಿದ್ದಾರೆ ಎಂದು ದೂರಿನಲ್ಲಿ ಕಾಂಗ್ರೆಸ್‌ ಆರೋಪಿಸಿದೆ. ಒಂದು ವೇಳೆ ಆಯೋಗವು ಇದರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ, ಅದು ಆಯೋಗಕ್ಕೆ ಕಪ್ಪುಚುಕ್ಕೆಯಾಗಲಿದೆ ಎಂದೂ ಹೇಳಿದೆ.

Advertisement

ಪ್ರತಿಕ್ರಿಯೆಗೆ ಚುನಾವಣ ಆಯೋಗ ನಕಾರ
ಹಿಂದೂಗಳ ಸಂಪತ್ತು ಮುಸ್ಲಿಮರಿಗೆ ಹಂಚಿಕೆಗೆ ಸಂಬಂಧಿಸಿದಂತೆ ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಚುನಾವಣ ಆಯೋಗ ನಿರಾಕರಿಸಿದೆ. “ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದಷ್ಟೇ ಆಯೋಗದ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ.

ಈವರೆಗಿನ ಯಾವೊಬ್ಬ ಪ್ರಧಾನಿಯೂ ಇಂಥ ತುತ್ಛ ಹೇಳಿಕೆ ನೀಡಿರಲಿಲ್ಲ. ಇತಿಹಾಸದಲ್ಲೇ ರಾಜಕೀಯ ವಾಕ್ಸಮರವು ಇಷ್ಟು ಕೆಳಮಟ್ಟಕ್ಕೆ ಇಳಿದಿರಲಿಲ್ಲ. ಆಯೋಗವು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ಕಪಿಲ್‌ ಸಿಬಲ್‌, ರಾಜ್ಯಸಭೆ ಸಂಸದ

ಸಮಾನತೆ ನಂಬುವ ದೇಶದ ಪ್ರತೀ ನಾಗರಿಕರ ಭಾವನೆಗಳನ್ನು ಮೋದಿ ಹೇಳಿಕೊಂಡಿದ್ದಾರೆ. ಬಿಜೆಪಿ ಅಥವಾ ಎನ್‌ಡಿ ಎಯ ಯಾವುದೇ ನಾಯಕ ಕಾಂಗ್ರೆಸ್‌ಗೆ ಕನ್ನಡಿ ತೋರಿಸಿದರೆ, ಅವರು ಸಿಟ್ಟಿಗೇಳುತ್ತಾರೆ.
ಗೌರವ್‌ ಭಾಟಿಯಾ, ಬಿಜೆಪಿ ವಕ್ತಾರ

ವಾಸ್ತವದಲ್ಲಿ ಭಾರತದ ಮಹಿಳೆಯರು ತಮ್ಮಲ್ಲಿದ್ದ ಆಭರಣಗಳನ್ನು ಅಡವಿಡಲು, ಮಾರಾಟ ಮಾಡಲು ಕಾರಣವೇ ಪ್ರಧಾನಿ ಮೋದಿ ಅವರ ದೂರದೃಷ್ಟಿ ಇಲ್ಲದ ನೀತಿಗಳು.
ಜೈರಾಂ ರಮೇಶ್‌, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next