ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ ರೋಡ್ ಶೋ ನಡೆಸಲಿದ್ದು, ಈಗಾಗಲೇ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.
ನಗರದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಅಲ್ಲಲ್ಲಿ ಪಾನೀಯ ವ್ಯವಸ್ಥೆ ಮಾಡಲಾಗಿದೆ. ಕುಣಿತ ಭಜನೆ ಸಹಿತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪಕ್ಷದ ಕಾರ್ಯಕರ್ತರು, ಇತರ ಸಾವರ್ಜನಿಜರು ಜಮಾವಣೆಗೊಂಡಿದ್ದಾರೆ. ಹೂವಿನ ಎಸಳುಗಳು ತುಂಬಿದ ಚೀಲಗಳನ್ನು ಅಲ್ಲಲ್ಲಿ ಇಡಲಾಗುತ್ತಿದೆ. ಆಮಿಸಿದ ಕೆಲವರು ಈಗಲೇ ಹೂವಿನ ಎಸಲು ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ.
ಮೈಸೂರು ಸಮಾವೇಶ ಮುಗಿಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಕೆಂಜಾರಿನಿಂದ ನೇರವಾಗಿ ಲೇಡಿ ಹಿಲ್ ನಾರಾಯಣ ಗುರು ವೃತ್ತಕ್ಕೆ ಆಗಮಿಸಿ ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ರಾತ್ರಿ 7.45ಕ್ಕೆ ರೋಡ್ ಶೋ ಆರಂಭವಾಗಲಿದೆ.
ಮೋದಿ ಮುಖವಾಡ, ಕೇಸರಿ ಶಾಲು ಹೊತ್ತ ಮಹಿಳೆಯರು, ಮಕ್ಕಳು ಸೇರಿದಂತೆ ಅಭಿಮಾನಿಗಳು ರಸ್ತೆ ಬದಿ ನೆರೆದಿದ್ದು ಮೋದಿಯವರಿಗೆ ಶುಭ ಕೋರಲು ಕಾತರರಾಗಿದ್ದಾರೆ.
ಸಾರ್ವಜನಿಕರಿಗೆ ಅಲ್ಲಲ್ಲಿ ಮಜ್ಜಿಗೆ ವಿತರಣೆ ಆರಂಭಗೊಂಡಿದೆ.ಎಸ್ ಪಿ ಜಿ ನೇತೃತ್ವದಲ್ಲಿ ಬಂದೋ ಬಸ್ತ್ ಏರ್ಪಡಿಸಲಾಗಿದ್ದು ಸಾವಿರಕ್ಕೂ ಅಧಿಕ ಪೊಲೀಸರು ಭದ್ರತೆಯಲ್ಲಿ ತೊಡಗಿಕೊಂಡಿದ್ದಾರೆ.ಲೇಡಿಹಿಲ್ ನಿಂದ ನವಭಾರತ ವೃತ್ತದವರೆಗಿನ ರಸ್ತೆಯಲ್ಲಿ ಸಾರ್ವಜನಿಕರ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ವಿಶೇಷ ವಾಹನವೇರಿ ರೋಡ್ ಶೋ ನಡೆಸಲಿದ್ದಾರೆ. ಲಾಲ್‌ಬಾಗ್, ಬಲ್ಲಾಳ್‌ಬಾಗ್,ಪಿವಿಎಸ್ ಮೂಲಕ ಸಾಗುವ ರೋಡ್‌ಶೋ ನವಭಾರತ ವೃತ್ತದಲ್ಲಿ ಸಮಾಪ್ತಿಗೊಳ್ಳಲಿದ್ದು, ಅಲ್ಲಿಂದ ಪ್ರಧಾನಿ ಮಂಗಳೂರು ವಿಮಾನ ನಿಲ್ದಾಣಕ್ಕೆ ನಿರ್ಗಮಿಸಿ ವಿಶೇಷ ವಿಮಾನ ಮೂಲಕ ಕೊಚ್ಚಿಗೆ ಪ್ರಯಾಣ ಬೆಳೆಸಲಿದ್ದಾರೆ.